ಕೆಲವು ಹಿಟ್ ಸಿನಿಮಾಗಳನ್ನು ನೀಡಿರುವ ಮಲಯಾಳಂ ನಿರ್ದೇಶಕ ಒಮರ್ ಲುಲು ವಿರುದ್ಧ ನಟಿಯೊಬ್ಬರು ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದಾರೆ.
ಎರ್ನಾಕುಲಂ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯುವನಟಿ, ನಿರ್ದೇಶಕ ಒಮರ್ ವಿರುದ್ಧ ದೂರು ನೀಡಿದ್ದು, ಎಫ್ಐಆರ್ ದಾಖಲಾಗಿದೆ.
ಸಿನಿಮಾದಲ್ಲಿ ಅವಕಾಶ ನೀಡುವುದಾಗಿ ಹೇಳಿ ನನ್ನ ವಿರುದ್ಧ ಹಲವು ಬಾರಿ ಲೈಂಗಿಕ ದೌರ್ಜನ್ಯ ಹಾಗೂ ಅತ್ಯಾಚಾರ ಮಾಡಲಾಗಿದೆ ಎಂದು ಯುವನಟಿ ನಿರ್ದೇಶಕ ಒಮರ್ ವಿರುದ್ಧ ಆರೋಪ ಮಾಡಿದ್ದಾರೆ.
ಪ್ರಕರಣದ ಬಗ್ಗೆ ಹೇಳಿಕೆ ನೀಡಿರುವ ನಿರ್ದೇಶಕ ಒಮರ್ ಲುಲು, ‘ಇದು ಬ್ಲಾಕ್ ಮೇಲ್ ಮಾಡುವ ತಂತ್ರವಷ್ಟೆ. ಆರೋಪ ಮಾಡಿ ನನ್ನ ಘನತೆ ಹಾಳು ಮಾಡುವ ಹಾಗೂ ನನ್ನಿಂದ ಹಣ ವಸೂಲಿ ಮಾಡುವುದು ಆ ನಟಿಯ ಉದ್ದೇಶ. ನನ್ನ ಈ ಹಿಂದಿನ ಸಿನಿಮಾದಲ್ಲಿ ಆ ನಟಿ ನಟಿಸಿದ್ದರು. ಈಗ ನಾನು ಹೊಸ ಸಿನಿಮಾ ಮಾಡುತ್ತಿದ್ದೇನೆ ಅದರ ಬೆನ್ನಲ್ಲೆ ಆ ನಟಿ ದೂರು ನೀಡಿದ್ದಾಳೆ. ಆಕೆಗೆ ನನ್ನ ಹೊಸ ಸಿನಿಮಾದಲ್ಲಿ ಅವಕಾಶ ಕೊಟ್ಟಿಲ್ಲವೆಂಬ ಕೋಪಕ್ಕೆ ಹೀಗೆ ಮಾಡಿದ್ದಾಳೆ’ ಎಂದಿದ್ದಾರೆ ನಿರ್ದೇಶಕ ಒಮರ್.
ಪ್ರಕರಣವನ್ನು ಇದೀಗ ನಿಡುಂಬಸ್ಸೇರಿ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ನಿರ್ದೇಶಕ ಒಮರ್ ವಿರುದ್ಧ ಐಪಿಸಿ ಸೆಕ್ಷನ್ 376ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ತನಿಖೆ ಜಾರಿಯಲ್ಲಿದೆ.

