ರಾಮ್ ಚರಣ್ ಹಾಗೂ ಉಪಾಸನಾ ಇತ್ತೀಚೆಗಷ್ಟೇ 11ನೇ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಈಗ ಇವರ ಕುಟುಂಬಕ್ಕೆ ಹೊಸ ಸದಸ್ಯೆಯ ಆಗಮನ ಆಗಿದೆ. ರಾಮ್ ಚರಣ್ ಪತ್ನಿ ಉಪಾಸನಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರ ಮೆಗಾ ಕುಟುಂಬದ ಖುಷಿಯನ್ನು ಹೆಚ್ಚಿಸಿದೆ. ಇವರ ಅಭಿಮಾನಿಗಳು ಖುಷಿಯಲ್ಲಿ ಸಂಭ್ರಮಿಸಿದ್ದಾರೆ. ಇಂದು (ಜೂನ್ 20) ಬೆಳಗ್ಗೆ ಈ ಖುಷಿಯ ಸುದ್ದಿ ಹೊರ ಬಿದ್ದಿದೆ.
ಉಪಾಸನಾ ಅವರನ್ನು ಸೋಮವಾರ ರಾತ್ರಿ ಹೈದರಾಬಾದ್ನ ಜುಬ್ಲಿ ಹಿಲ್ಸ್ನಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇಂದು ಮುಂಜಾನೆ ಉಪಾಸನಾಗೆ ಮಗು ಜನಿಸಿದ ವಿಚಾರವನ್ನು ಆಸ್ಪತ್ರೆಯವರು ಖಚಿತಪಡಿಸಿದ್ದಾರೆ. ರಾಮ್ ಚರಣ್ ಮತ್ತು ಉಪಾಸನಾ ಅವರು 2012ರ ಜೂನ್ 14ರಂದು ಮದುವೆ ಆದರು. ಮದುವೆ ಆಗಿ ದಶಕಗಳ ಬಳಿಕ ಅವರು ಮೊದಲ ಮಗು ಪಡೆಯಲು ನಿರ್ಧರಿಸಿದ್ದರು. ಈಗ ಈ ದಂಪತಿಗೆ ಹೆಣ್ಣು ಮಗು ಜನಿಸಿದ್ದು ಅಭಿಮಾನಿಗಳಿಗೆ ಖುಷಿ ನೀಡಿದೆ. ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳ ಕಡೆಯಿಂದ ಇವರಿಗೆ ಶುಭಾಶಯ ಬರುತ್ತಿದೆ.