ಹಿರಿಯ ನಿರ್ದೇಶಕ ಎಸ್ ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದ ರಕ್ತ ಕಾಶ್ಮೀರ ಚಿತ್ರ ಜ.30ರಂದು ಬಿಡುಗಡೆಯಾಗುತ್ತಿದೆ. ಉಪೇಂದ್ರ ಹಾಗೂ ರಮ್ಯಾ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಮಾರ್ಸ್ ಸುರೇಶ್ ಅವರು ವಿತರಣೆ ಮಾಡುತ್ತಿದ್ದಾರೆ.
ಶೀರ್ಷಿಕೆಯೇ ತಿಳಿಸುವಂತೆ ಪಾಕ್ ಆಕ್ರಮಿತ ಕಾಶ್ಮೀರವನ್ನು ವಾಪಸ್ ಪಡೆಯುವ ಕಥಾಹಂದರ ಹೊಂದಿದೆ. ಪಾಕ್ ಆಕ್ರಮಿತ ಉಗ್ರಗಾಮಿಗಳು ಕಾಶ್ಮೀರದಲ್ಲಷ್ಟೇ ಅಲ್ಲ. ಬೆಂಗಳೂರು ಸೇರಿದಂತೆ ಭಾರತದ ವಿವಿಧ ನಗರಗಳಲ್ಲೂ ದಾಳಿ ನಡೆಸಿ ಸಾವಿರಾರು ಅಮಾಯಕರನ್ನು ಹತ್ಯೆ ಮಾಡಿರುತ್ತಾರೆ. ಇದರಿಂದ ನೊಂದ ಚಿತ್ರದ ನಾಯಕ ಹಾಗೂ ನಾಯಕಿ ಬೆಂಗಳೂರಿನಿಂದ ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಹೋಗಿ ಅಲ್ಲಿರುವ ಉಗ್ರರನ್ನು ಮಟ್ಟಹಾಕುವ ಸನ್ನಿವೇಶವನ್ನು ಈ ಚಿತ್ರದಲ್ಲಿ ಚಿತ್ರೀಸಿಕೊಳ್ಳಲಾಗಿದೆ.
ಕಾಶ್ಮೀರದಲ್ಲೇ ಸುಮಾರು ಒಂದು ತಿಂಗಳಿಗೂ ಅಧಿಕ ಚಿತ್ರೀಕರಣ ಮಾಡಲಾಗಿದೆ. ಸಾಕಷ್ಟು ಮಕ್ಕಳು ಸಹ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ದೇಶಪ್ರೇಮ ಸಾರುವ ಈ ಚಿತ್ರವನ್ನು ಕುಟುಂಬ ಸಮೇತ ನೋಡಬೇಕು. ಇನ್ನೂ ಈ ಚಿತ್ರದ ಮತ್ತೊಂದು ವಿಶೇಷವೆಂದರೆ ಹದಿನೆಂಟು ನಿಮಿಷಗಳ ಒಂದು ವಿಶೇಷ ಗೀತೆ ಇದೆ.
ಈ ಹಾಡಿನಲ್ಲಿ ವಿಷ್ಣುವರ್ಧನ್, ಅಂಬರೀಶ್, ಶ್ರೀನಾಥ್, ಶಿವರಾಜಕುಮಾರ್, ಪುನೀತ್ ರಾಜಕುಮಾರ್, ಜಗ್ಗೇಶ್, ಉಪೇಂದ್ರ, ರಮೇಶ್ ಅರವಿಂದ್, ದರ್ಶನ್, ಜೈ ಜಗದೀಶ್, ಆದಿತ್ಯ ಸೇರಿದಂತೆ ಕನ್ನಡದ ದಿಗ್ಗಜ ನಾಯಕರು ಅಭಿನಯಿಸಿದ್ದಾರೆ. ಇದು ಈವರೆಗೂ ಯಾರು ಮಾಡಿರದ ದಾಖಲೆ ಎನ್ನತ್ತಾರೆ ನಿರ್ದೇಶಕ ರಾಜೇಂದ್ರಸಿಂಗ್ ಬಾಬು.
ಎಸ್ ವಿ ರಾಜೇಂದ್ರಸಿಂಗ್ ಬಾಬು ಅವರೆ ರಕ್ತ ಕಾಶ್ಮೀರ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ಸಂಭಾಷಣೆ ಎಂ.ಎಸ್ ರಮೇಶ್ ಅವರದು. ಗುರುಕಿರಣ್ ಸಂಗೀತ ನಿರ್ದೇಶನದ ಈ ಚಿತ್ರದಲ್ಲಿ ಉಪೇಂದ್ರ, ರಮ್ಯ, ಮುಖೇಶ್ ರಿಶಿ, ದೊಡ್ಡಣ್ಣ, ಓಂಪ್ರಕಾಶ್ ರಾವ್, ಅನಿಲ, ಕುರಿ ಪ್ರತಾಪ್ ಮುಂತಾದವರಿದ್ದಾರೆ. ಎಂಡಿಬಿ ಪ್ರೊಡಕ್ಷನ್ಸ್ ನಡಿ ನಿರ್ಮಾಣವಾಗಿದೆ.

