ಬೆಂಗಳೂರು: ತೆಲುಗು ಚಿತ್ರರಂಗದ ನಟ ರಾಜ್ ತರುಣ್ ಕಳೆ ಒಂದು ವಾರದಿಂದಲೂ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ಅವರ ಗರ್ಲ್​ಫ್ರೆಂಡ್. ರಾಜ್ ತರುಣ್​ ಅವರ ಮಾಜಿ ಪ್ರೇಯಸಿ ಲಾವಣ್ಯ, ರಾಜ್ ವಿರುದ್ಧ ದೂರು ನೀಡಿದ್ದು, ರಾಜ್​ ಅನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ. ಇದೀಗ ಲಾವಣ್ಯ ಆತ್ಮಹತ್ಯೆಗೆ ಯತ್ನಿಸಿದ್ದು ಪೊಲೀಸರು ಮಧ್ಯ ಪ್ರವೇಶಿಸಿ ಲಾವಣ್ಯ ಅವರ ಆತ್ಮಹತ್ಯೆ ತಡೆದಿದ್ದಾರೆ ಎನ್ನಲಾಗುತ್ತಿದೆ.

ಅದೇ ದಿನ ರಾತ್ರಿ ವಕೀಲರಿಗೆ ಸಂದೇಶ ಕಳಿಸಿದ್ದ ಲಾವಣ್ಯ, ‘ಈ ಪ್ರಪಂಚದಲ್ಲಿ ನನ್ನ ದಿನಗಳು ಅಂತ್ಯವಾದವು’, ‘ಈ ಮೈಂಡ್ ಗೇಮ್, ಗಾಸಿಪ್​ಗಳಿಂದ ನನಗೆ ಸಾಕಾಗಿ ಹೋಗಿದೆ’ ಎಂದೆಲ್ಲ ಸಂದೇಶಗಳನ್ನು ಕಳಿಸಿದ್ದರಂತೆ. ಕೂಡಲೇ ಲಾವಣ್ಯರ ವಕೀಲರು ನರಸಂಗಿ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಕೂಡಲೇ ಲಾವಣ್ಯರ ಮನೆಗೆ ಧಾವಿಸಿದ ಪೊಲೀಸರು ಆಕೆಯ ಆತ್ಮಹತ್ಯೆ ಪ್ರಯತ್ನವನ್ನು ತಡೆದಿದ್ದಾರೆ ಎನ್ನಲಾಗುತ್ತಿದೆ.

ನಟ ರಾಜ್ ತರುಣ್ ವಿರುದ್ಧ ಆರೋಪ ಮಾಡಿರುವ ಲಾವಣ್ಯ, ತಾವು ಹಾಗೂ ರಾಜ್, ಕಳೆದ ಹತ್ತಕ್ಕೂ ಹೆಚ್ಚು ವರ್ಷಗಳಿಂದ ಪ್ರೇಮಿಗಳಾಗಿದ್ದು, ಆದರೆ ಇತ್ತೀಚೆಗೆ ರಾಜ್, ಬೇರೆ ನಟಿಯೊಂದಿಗೆ ಪ್ರೇಮಕ್ಕೆ ಬಿದ್ದು, ತಮಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮದುವೆಯಾಗುವುದಾಗಿ ಭರವಸೆ ನೀಡಿ ತಮ್ಮೊಂದಿಗೆ ಲೈಂಗಿಕ ಕ್ರಿಯೆಯನ್ನೂ ನಡೆಸಿದ್ದಾರೆ ಎಂದೆಲ್ಲ ಲಾವಣ್ಯ ಆರೋಪ ಮಾಡಿದ್ದಾರೆ. ನರ್ಸಂಗಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ರಾಜ್ ವಿರುದ್ಧ ದೂರು ಸಹ ದಾಖಲಾಗಿದೆ.