ಟಾಲಿವುಡ್ ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಟನೆಯಲ್ಲಿ ಮೂಡಿಬರುತ್ತಿರುವ ‘ರಣಬಾಲಿ’ ಸಿನಿಮಾವು 2026ರ ಅಕ್ಟೋಬರ್ 16ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ ಎಂದು ಚಿತ್ರತಂಡ ತಿಳಿಸಿದೆ.
ಸಾಮಾಜಿಕ ಮಾಧ್ಯಮ ಎಕ್ಸ್ ಖಾತೆಯಲ್ಲಿ ರಣಬಾಲಿ ಚಿತ್ರತಂಡ ಪೋಸ್ಟರ್ ಮೂಲಕ ಸಿನಿಮಾ ಬಿಡುಗಡೆ ದಿನಾಂಕವನ್ನು ಅಧಿಕೃತವಾಗಿ ಹಂಚಿಕೊಂಡಿದೆ. ಅದರ ಜೊತೆಗೆ ‘ನಮ್ಮ ಇತಿಹಾಸದ ಕರಾಳ ಅಧ್ಯಾಯ ಇದೇ ಅಕ್ಟೋಬರ್‌ನಲ್ಲಿ ಬರಲಿದೆ’ ಎಂದು ಬರೆದುಕೊಂಡಿದೆ.
ಈ ಸಿನಿಮಾದಲ್ಲಿ ವಿಜಯ್ ದೇವರಕೊಂಡ ‘ರಣಬಾಲಿ’ ಎಂಬ ಸ್ವಾತಂತ್ರ್ಯ ಹೋರಾಟಗಾರನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ರಶ್ಮಿಕಾ ಮಂದಣ್ಣ ‘ಜಯಮ್ಮ’ ಎಂಬ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರವನ್ನು ಮೈತ್ರಿ ಮೂವಿ ಮೇಕರ್ಸ್‌ನ ನವೀನ್ ಯೆರ್ನೇನಿ ಮತ್ತು ವೈ. ರವಿ ಶಂಕರ್ ನಿರ್ಮಿಸಿದ್ದಾರೆ. ಈ ಸಿನಿಮಾ ಕಥೆಯು 19ನೇ ಶತಮಾನದಲ್ಲಿ ಬ್ರಿಟಿಷ್ ಆಡಳಿತದ ಸಮಯದಲ್ಲಿ ನಡೆದ ನಿಜ ಘಟನೆಗಳಿಂದ ಪ್ರೇರಿತವಾಗಿದೆ.
ರಾಹುಲ್ ಸಾಂಕೃತ್ಯಾಯನ್ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದಾರೆ. ಅಜಯ್ ಅತುಲ್ ಈ ಚಿತ್ರಕ್ಕೆ ಸಂಗೀತ ಕೊಟ್ಟಿದ್ದಾರೆ. ‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೇಡ್’ ಸಿನಿಮಾಗಳ ನಂತರ ರಶ್ಮಿಕಾ ಮಂದಣ್ಣ ಹಾಗೂ ವಿಜಯ್ ಒಟ್ಟಿಗೆ ನಟಿಸಿದ್ದಾರೆ. ರಶ್ಮಿಕಾ ಹಾಗೂ ವಿಜಯ್ ದೇವರಕೊಂಡ ಮದುವೆ ಬಳಿಕ ತೆರೆಕಾಣುತ್ತಿರುವ ಮೊದಲ ಸಿನಿಮಾ ಇದಾಗಿದೆ.
ಇನ್ನು, ನಟ ರಜನಿಕಾಂತ್ ಅವರ ‘ಜೈಲರ್ 2’ ಸಿನಿಮಾ ಅಕ್ಟೋಬರ್ 15ರಂದು ಬಿಡುಗಡೆಗೆ ಸಿದ್ಧವಾಗಿದೆ. ಅ.16ರಂದು ‘ರಣಬಾಲಿ’ ಬಿಡುಗಡೆಯಾಗುತ್ತಿದ್ದು, ಜೈಲರ್ 2ಗೆ ಟಕ್ಕರ್ ಕೊಡಲಿದೆಯಾ ಎಂದು ಕಾದು ನೋಡಬೇಕಿದೆ.

