ಹೈದ್ರಾಬಾದ್ : ಹಿಂದಿ ಭಾಷೆಯನ್ನು ಭಾರತದ ‘ರಾಜಭಾಷೆ’ ಎಂದು ಕರೆದಿರುವ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ ಪವನ್ ಕಲ್ಯಾಣ್ ಅವರ ಹೇಳಿಕೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ.
ಕಾರ್ಯಕ್ರಮವೊಂದರಲ್ಲಿ ಅವರು ನೀಡಿರುವ ಈ ಹೇಳಿಕೆಯ ವಿರುದ್ಧ ದಕ್ಷಿಣ ಭಾರತದ ಭಾಷಾ ಪ್ರೇಮಿಗಳು ಹಾಗೂ ನೆಟ್ಟಿಗರು ತೀವ್ರವಾಗಿ ಕಿಡಿಕಾರುತ್ತಿದ್ದಾರೆ. ಭಾರತದ ಸಂವಿಧಾನದ ಪ್ರಕಾರ ಯಾವುದೇ ಒಂದು ಭಾಷೆಗೆ ರಾಷ್ಟ್ರಭಾಷೆಯ ಸ್ಥಾನಮಾನ ನೀಡಿಲ್ಲ, ಎಲ್ಲಾ ಪ್ರಾದೇಶಿಕ ಭಾಷೆಗಳೂ ಸಮಾನ ಎಂದು ಹಲವರು ಪವನ್ ಕಲ್ಯಾಣ್ ಅವರ ನಿಲುವನ್ನು ಕಟುವಾಗಿ ಟೀಕಿಸಿದ್ದಾರೆ.
ಪ್ರಾದೇಶಿಕ ಭಾಷೆ ಮತ್ತು ಅಸ್ಮಿತೆಗೆ ಮೊದಲ ಆದ್ಯತೆ ನೀಡಬೇಕಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ದಕ್ಷಿಣ ಭಾರತದ ನಾಯಕರೊಬ್ಬರೇ, ಹಿಂದಿ ಹೇರಿಕೆಯನ್ನು ಬೆಂಬಲಿಸುವಂತೆ ಮಾತನಾಡಿರುವುದು ಸದ್ಯ ದೊಡ್ಡ ವಿವಾದಕ್ಕೆ ನಾಂದಿ ಹಾಡಿದೆ.
ಉತ್ತರ ಭಾರತದ ನಾಯಕರು ದಕ್ಷಿಣ ಭಾರತದವರನ್ನು ದ್ವೀತಿಯ ದರ್ಜೆ ಮನಸ್ಥಿತಿಯಲ್ಲಿ ನೋಡಬಾರದು. ಮುಂಬರುವ ದಿನಗಳಲ್ಲಿ ಈ ಭಾಷಾ ವಿವಾದ ಮತ್ತಷ್ಟು ರಾಜಕೀಯ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ.

