ಬೆಂಗಳೂರು: ದರ್ಶನ್‌ ಜೈಲು ಪಾಲಾದ ಬೆನ್ನಲ್ಲೇ ಜನಪ್ರಿಯ ನಟಿಯೊಬ್ಬರು ಜೈಲು ಸೇರುವ ಪರಿಸ್ಥಿತಿ ಎದುರಾಗಿದೆ. ಚೆಕ್ ಬೌನ್ಸ್ ಪ್ರಕರಣ ಸಾಬೀತಾಗಿರುವ ಹಿನ್ನೆಲೆಯಲ್ಲಿ ನಟಿ ಪದ್ಮಜಾ ರಾವ್ ಅವರಿಗೆ ಮೂರು ತಿಂಗಳು ಜೈಲು ಶಿಕ್ಷೆ ಹಾಗೂ ನಲವತ್ತು ಲಕ್ಷ ರೂಪಾಯಿ ದಂಡ ವಿಧಿಸಿ ಮಂಗಳೂರಿನ ಎಂಟನೇ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ.

ನಾಲ್ಕು ವರ್ಷಗಳ ಹಿಂದೆ ನಟಿ ಪದ್ಮಜಾ ರಾವ್ ಅವರ ಚೆಕ್‌ ಬೌನ್ಸ್ ಪ್ರಕರಣ ಭಾರೀ ಸುದ್ದಿಯಾಗಿತ್ತು. ತುಳು ಸಿನಿಮಾ ನಿರ್ದೇಶಕ ವೀರೇಂದ್ರ ಶೆಟ್ಟಿ ಕಾವೂರು ಅವರ ಬಳಿಯಿಂದ ಪದ್ಮಜಾ ರಾವ್, 41ಲಕ್ಷ ರೂಪಾಯಿ ಹಣ ಪಡೆದು, ಆ ಬಳಿಕ ಹಿಂದಿರುಗಿಸದೆ ವಂಚಿಸಿದ್ದಾರೆ ಎಂದು 2021ರಲ್ಲಿ ಕೇಸ್‌ ದಾಖಲಾಗಿತ್ತು. ಇದೀಗ ಈ ಪ್ರಕರಣದ ತೀರ್ಪು ಹೊರಬಿದ್ದಿದ್ದು, ಸಿನಿಮಾ ಜೊತೆಗೆ ಸದ್ಯ ಕಿರುತೆರೆಯಲ್ಲೂ ಬಹುಬೇಡಿಕೆಯ ನಟಿಯಾಗಿರುವ ಪದ್ಮಜಾ ರಾವ್ ಅವರನ್ನು ದೋಷಿ ಎಂದು ತೀರ್ಪು ನೀಡಿರುವ ನ್ಯಾಯಾಲಯ ಮೂರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.