ತಿರುವನಂತಪುರಂ: ಹೇಮಾ ಸಮಿತಿ ವರದಿ ಸಲ್ಲಿಕೆಯಾದ ಬೆನ್ನಲ್ಲೇ ಮಾಲಿವುಡ್ ಸಿನಿಮಾರಂಗದಲ್ಲಿ ನಡೆದಿದ್ದ ದೌರ್ಜನ್ಯ ಹಾಗೂ ಕಿರುಕುಳ ಪ್ರಕರಣಗಳು ಬೆಳಕಿಗೆ ಬರುತ್ತಿದೆ.
ಪೃಥ್ವಿರಾಜ್ ಸುಕುಮಾರನ್ ಮತ್ತು ಮೋಹನ್ ಲಾಲ್ ಅವರ 2022ರ ಚಲನಚಿತ್ರ ʼಬ್ರೋ ಡ್ಯಾಡಿʼ ಚಿತ್ರದ ಸಹಾಯಕ ನಿರ್ದೇಶಕರ ಮೇಲೆ ಅತ್ಯಾಚಾರ ಮತ್ತು ನಗ್ನ ಚಿತ್ರಗಳೊಂದಿಗೆ ಬ್ಲ್ಯಾಕ್ ಮೇಲ್ ಮಾಡಿರುವ ಆರೋಪವನ್ನು ಜೂನಿಯರ್ ಅರ್ಟಿಸ್ಟ್ ಮಾಡಿದ್ದಾರೆ.
ಆರೋಪವೇನು?: 2021ರಲ್ಲಿ ʼಬ್ರೋ ಡ್ಯಾಡಿʼ ಸಿನಿಮಾದಲ್ಲಿ ಮದುವೆಯ ದೃಶ್ಯದಲ್ಲಿ ನಟಿಸುವ ದೃಶ್ಯವೊಂದಿತ್ತು. ಸಿನಿಮಾದ ಸಹಾಯಕ ನಿರ್ದೇಶಕ ಮನ್ಸೂರ್ ರಶೀದ್ ಸಿನಿಮಾದಲ್ಲಿ ಹೆಚ್ಚಿನ ದೃಶ್ಯದಲ್ಲಿ ನಟಿಸಲು ಅವಕಾಶ ನೀಡುತ್ತೇನೆ ಎನ್ನುವ ನೆಪದಲ್ಲಿ ನನ್ನನ್ನು ಚಿತ್ರದ ಸಿಬ್ಬಂದಿ ತಂಗಿದ್ದ ಹೋಟೆಲ್ ಕೋಣೆಗೆ ಕರೆದೊಯ್ದರು. ನಂತರ ಪಾನೀಯದಲ್ಲಿ ಅಮಲು ಬರುವ ಪದಾರ್ಥವನ್ನು ಹಾಕಿ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.
ಮನ್ಸೂರ್ ನನ್ನ ನಗ್ನ ಫೋಟೋಗಳನ್ನು ಕ್ಲಿಕ್ಕಿಸಿ, ಆ ಫೋಟೋಗಳನ್ನು ಇಟ್ಟುಕೊಂಡು ನನಗೆ ಬ್ಲ್ಯಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ನಗ್ನ ಫೋಟೋಗಳನ್ನು ಬಳಸಿ ರಶೀದ್ ನನ್ನಿಂದ ಹಲವಾರು ಬಾರಿ ಬ್ಲ್ಯಾಕ್ಮೇಲ್ ಮಾಡಿ ಹಣ ವಸೂಲಿ ಮಾಡಿದ್ದಾರೆ ಎಂದು ನಟಿ ಆರೋಪಿಸಿದ್ದಾರೆ.

