ಹೈದರಾಬಾದ್: ಹೈದರಾಬಾದ್ ವಿಪತ್ತು ಪ್ರತಿಕ್ರಿಯೆ ಮತ್ತು ಆಸ್ತಿಗಳ ಮಾನಿಟರಿಂಗ್ ಮತ್ತು ಪ್ರೊಟೆಕ್ಷನ್ ಅಧಿಕಾರಿಗಳು ಖ್ಯಾತ ನಟ ನಾಗಾರ್ಜುನ ಒಡೆತನದ ವಿಸ್ತಾರವಾದ ಎನ್-ಕನ್ವೆನ್ಷನ್ ಸೆಂಟರನ್ನು ದ್ವಂಸಗೊಳಿಸಿದ್ದಾರೆ. ಕೆರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ಕಟ್ಟಡ ನಿರ್ಮಾಣ ಮಾಡಿದ ಆರೋಪ ಇತ್ತು. ಹೀಗಾಗಿ ಇದನ್ನು ನೆಲಸಮ ಮಾಡಲಾಗಿದೆ. ಆದರೆ ಈ ಆರೋಪವನ್ನು ನಾಗಾರ್ಜುನ ಅವರು ಅಲ್ಲಗಳೆದಿದ್ದಾರೆ. ‘ನನ್ನಿಂದ ಯಾವುದೇ ತಪ್ಪು ನಡೆದಿಲ್ಲ, ನಾನು ಯಾವುದೇ ನಿಯಮ ಉಲ್ಲಂಘನೆ ಮಾಡಿಲ್ಲ’ ಎಂದು ಅವರು ಹೇಳಿದ್ದಾರೆ.
ನಾಗಾರ್ಜುನ ಅವರಿಗೆ ಸೇರಿದ ‘ಎನ್ ಕನ್ವೆಂಷನ್ ಹಾಲ್’ 10 ಎಕರೆ ಜಾಗದಲ್ಲಿ ಇತ್ತು. ಈ ಕಟ್ಟಡ ನಿರ್ಮಾಣದ ವೇಳೆ ಹಲವು ನಿಯಮಗಳ ಉಲ್ಲಂಘನೆ ಮಾಡಲಾಗಿದೆ ಎಂಬುದು ಸಾಬೀತಾಗಿದೆ. ಮಾದಾಪುರದ ತಮ್ಮಿಡಿಕುಂಟ ಕೆರೆಯ 1.12 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ. ಉಳಿದ ಎರಡು ಎಕರೆ ಕೆರೆ ಬಫರ್ಜೋನ್ನಲ್ಲಿ ಬರುತ್ತದೆ ಎನ್ನಲಾಗಿದೆ.
ಇನ್ನೂ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯೆ ನೀಡಿರುವ ನಟ,‘ಪಟ್ಟಾ ಭೂಮಿಯಲ್ಲೇ ಎನ್ ಕನ್ವೆನ್ಷಲ್ ಹಾಲ್ ನಿರ್ಮಾಣ ಮಾಡಿದ್ದೆವು. ಕೆರೆಯ ಒಂದು ಇಂಚು ಭೂಮಿ ಕೂಡ ನಾವು ಆಕ್ರಮಿಸಿಲ್ಲ. ಈ ಹಿಂದೆಯೂ ನೆಲಸಮ ಮಾಡಲು ನೋಟಿಸ್ ನೀಡಲಾಗಿತ್ತು, ನಾವು ಕೋರ್ಟ್ನಿಂದ ತಡೆಯಾಜ್ಞೆ ತಂದಿದ್ದೆವು. ಕೋರ್ಟ್ ತಡೆಯಾಜ್ಞೆ ನೀಡಿದ್ದರೂ ಕಟ್ಟಡ ನೆಲಸಮ ಮಾಡಿದ್ದಾರೆ’ ಎಂದು ನಾಗಾರ್ಜುನ ಅವರು ಆರೋಪಿಸಿದ್ದಾರೆ.

