ಚಿತ್ರರಂಗದ ಅತ್ಯುನ್ನತ ಗೌರವವಾಗಿರುವ ಆಸ್ಕರ್ ಪ್ರಶಸ್ತಿ ರೇಸ್‌ಗೆ ಭಾರತದ ಫೇಮಸ್ ಮರಾಠಿ ಥ್ರಿಲ್ಲರ್ ಸಿನಿಮಾ ‘ಗೊಂಡಾಲ್’ ಅಧಿಕೃತವಾಗಿ ಆಯ್ಕೆಯಾಗಿದೆ.
ಈ ಸಂತಸದ ವಿಷಯವನ್ನು ಭಾರತೀಯ ಚಲನಚಿತ್ರ ಒಕ್ಕೂಟ (FFI) ಶುಕ್ರವಾರ ಪ್ರಕಟಿಸಿದೆ. ಸಂತೋಷ್ ದವಾಖರ್ ನಿರ್ದೇಶನದ ಈ ಚಿತ್ರವು 99ನೇ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದ ‘ಅತ್ಯುತ್ತಮ ಅಂತರರಾಷ್ಟ್ರೀಯ ಚಲನಚಿತ್ರ’ ವಿಭಾಗದಲ್ಲಿ ದೇಶವನ್ನು ಪ್ರತಿನಿಧಿಸಲಿದೆ. ಖ್ಯಾತ ಕನ್ನಡ ನಿರ್ದೇಶಕ ಪಿ. ಶೇಷಾದ್ರಿ ಅವರ ನೇತೃತ್ವದ ತೀರ್ಪುಗಾರರ ಸಮಿತಿಯಲ್ಲಿ ಈ ಸಿನಿಮಾವನ್ನು ಆಸ್ಕರ್‌ಗೆ ಅಂತಿಮಗೊಳಿಸಿದೆ.
ಈ ಬಾರಿ ಆಸ್ಕರ್ ರೇಸ್‌ಗಾಗಿ ಭಾರತದಿಂದ ಒಟ್ಟು 33 ಚಲನಚಿತ್ರಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ 14 ಹಿಂದಿ, ತಲಾ 4 ಮರಾಠಿ, ತೆಲುಗು ಮತ್ತು ಗುಜರಾತಿ, 3 ತಮಿಳು ಹಾಗೂ ಮಲಯಾಳಂ ಮತ್ತು ನಾಗಮೀಸ್ ಭಾಷೆಯ ತಲಾ ಒಂದು ಚಿತ್ರಗಳು ಸ್ಪರ್ಧೆಯಲ್ಲಿದ್ದವು. ವಿಶೇಷವೆಂದರೆ ಈ ಬಾರಿ ಒಂದು ಮೂಕಿ ಚಿತ್ರವೂ ಸಹ ರೇಸ್‌ನಲ್ಲಿತ್ತು. ಈ ಎಲ್ಲಾ ಚಿತ್ರಗಳನ್ನು ಹಿಂದಿಕ್ಕಿ ‘ಗೊಂಡಾಲ್’ ಆಸ್ಕರ್ ರೇಸ್‌ಗೆ ಆಯ್ಕೆಯಾಗಿದೆ.

