ತಿರುವನಂತಪುರಂ: ಭಾರತದಾದ್ಯಂತ ಭಾರಿ ಸದ್ದು ಮಾಡಿದ ಮಲಯಾಳಂನ ಮಂಜುಮ್ಮೇಲ್​ ಬಾಯ್ಸ್ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅನಿಲ್​ ಕ್ಸೇವಿಯರ್​ (39) ಮಂಗಳವಾರ (ಆ.27) ಕೊನೆಯುಸಿರೆಳೆದಿದ್ದಾರೆ.

ಅಂಗಮಾಲಿಯಲ್ಲಿ ಫುಟ್​ಬಾಲ್​ ಆಡುವಾಗ ಅನಿಲ್​ ಅವರಿಗೆ ತೀವ್ರ ಎದೆನೋವು ಕಾಣಿಕೊಂಡಿತ್ತು.

ಬಳಿಕ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲಿಸದೇ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಕಾರ್ಡಿಯಾಕ್​ ಅರೆಸ್ಟ್​ನಿಂದ ಮೃತಪಟ್ಟಿದ್ದಾರೆಂದು ವೈದ್ಯರು ತಿಳಿಸಿದ್ದಾರೆ. ಇನ್ನು (ಆ.28) ಬೆಳಗ್ಗೆ 11ರಿಂದ ನಿವಾಸದಲ್ಲಿ ಹಾಗೂ ಮಧ್ಯಾಹ್ನ 3ರವರೆಗೆ ನಾಸ್ ಆಡಿಟೋರಿಯಂನಲ್ಲಿ ಸಾರ್ವಜನಿಕ ದರ್ಶನವಿರುತ್ತದೆ. ಆನಂತರ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.

ಅನಿಲ್​ ಅವರು ಜಾನ್​ ಇ ಮಾನ್​, ತಲ್ಲುಮಲ ಮತ್ತು ಥೇಕ್ಕು ವಡಕ್ಕು ಸೇರಿದಂತೆ ಕೆಲ ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿ ಅನಿಲ್​ ಕ್ಸೇವಿಯರ್ ಕೆಲಸ ಮಾಡಿದ್ದಾರೆ. ಈ ವರ್ಷದ ಫೆಬ್ರವರಿ 22ರಂದು ತೆರೆಕಂಡ ಸೂಪರ್​ ಹಿಟ್​ ಮಂಜುಮ್ಮೇಲ್​ ಬಾಯ್ಸ್ ಸಿನಿಮಾಗೂ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು.