ಬೆಂಗಳೂರು : ‘ಮನದ ಕಡಲು’ ಸಿನಿಮಾದ ಶೂಟಿಂಗ್ ವೇಳೆ. 30 ಅಡಿ ಮೇಲಿಂದ ಬಿದ್ದ ಲೈಟ್ ಮ್ಯಾನ್ ನಿಧನರಾಗಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯಲ್ಲಿ ನಡೆದಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಯೋಗರಾಜ್ ಭಟ್ ಸೇರಿ ಚಿತ್ರತಂಡದ ಕೆಲವರ ಮೇಲೆ ಎಫ್ಐಆರ್ ದಾಖಲಾಗಿದೆ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದಿದ್ದರಿಂದ ‘ಮನದ ಕಡಲು’ ಚಿತ್ರದ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಅಡಕಮಾರನಹಳ್ಳಿಯ ಈ.ಕೆ. ಕೃಷ್ಣಪ್ಪ, ಮಾನೇಜರ್ ಸುರೇಶ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್ ಮೇಲೆ ದೂರು ದಾಖಲಾಗಿದೆ.
ಕಳೆದ 15 ದಿನಗಳಿಂದ ಅಡಕಮಾರನಹಳ್ಳಿಯ ವಿ.ಆರ್.ಎಲ್. ಗೋಡೌನ್ನಲ್ಲಿ ‘ಮನದ ಕಡಲು’ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಮಂಗಳವಾರ ಸಂಜೆ 5.10ರ ವೇಳೆಗೆ ಲೈಟ್ ಮ್ಯಾನ್ ಮೋಹನ್ ಕುಮಾರ್ ಬಿದ್ದು ಸಾವನ್ನಪ್ಪಿದ್ದಾರೆ. 30 ಅಡಿ ಎತ್ತರದ ಅಲ್ಯುಮಿನಿಯಂ ರೊಸ್ಟ್ರಮ್ ಮೇಲೆ ಹತ್ತಿ ಲೈಟ್ ಬಿಚ್ಚುತ್ತಿದ್ದ ಮೋಹನ್ ಅಲ್ಲಿಂದ ಬಿದ್ದರು.
ಶೂಟಿಂಗ್ ಸೆಟ್ನಲ್ಲಿ ಕೆಲಸ ಮಾಡುತ್ತಿದ್ದ ಮೋಹನ್ ಕುಮಾರ್ಗೆ ಸುರಕ್ಷತಾ ಸಾಧನಗಳನ್ನು ಕೊಡದೇ ಕೆಲಸ ಮಾಡಿಸುತ್ತಿದ್ದರು ಎಂಬ ಆರೋಪ ಚಿತ್ರತಂಡದ ಮೇಲೆ ಬಂದಿದೆ. ಮೋಹನ್ ಕುಮಾರ್ ಮೇಲಿಂದ ಕೆಳಕ್ಕೆ ಬಿದ್ದಾಗ ತಲೆಗೆ ಏಟಾಗಿ ತೀವ್ರ ರಕ್ತಸ್ರಾವ ಆಯಿತು. ಬಳಿಕ ಅವರನ್ನು ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರು. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

