ಮಂಗಳೂರು : ಕರಾವಳಿಯ ಸಿನಿರಂಗದಲ್ಲಿ ಮತ್ತೊಂದು ಹೊಸ ಪ್ರಯತ್ನ ಸದ್ದು ಮಾಡುತ್ತಿದೆ. ಸನ್‌ಶೈನ್ ಕ್ರಿಯೇಷನ್ಸ್ ಬ್ಯಾನರ್ ಅಡಿ ನಿರ್ಮಾಣವಾಗಿರುವ, ಕೊಂಕಣಿ ಮತ್ತು ತುಳು ದ್ವಿಭಾಷಾ ಚಲನಚಿತ್ರ “ವಾಗಾನ್ಸೋ ಖೆಳ್” ಇದೀಗ ಬಿಡುಗಡೆಯ ಹಂತ ತಲುಪಿದೆ.

ಪ್ರವೀಣ್ ಫೆರ್ನಾಂಡಿಸ್ ನಿರ್ಮಿಸಿರುವ ಈ ಚಿತ್ರಕ್ಕೆ ಅರ್ವಿನ್ ಲೋಬೋ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರವು ಕರಾವಳಿಯ ಸಾಂಸ್ಕೃತಿಕ ಸೊಗಡನ್ನು ಒಳಗೊಂಡಿರುವುದರಿಂದ ಸಿನಿಪ್ರಿಯರಲ್ಲೂ ನಿರೀಕ್ಷೆ ಹೆಚ್ಚಿಸಿದೆ.

ಇದೀಗ ಈ ಚಿತ್ರದ ಗ್ರಾಂಡ್ ಪ್ರೀಮಿಯರ್ ಶೋ ಮಂಗಳೂರಿನ ಬಿಗ್ ಸಿನಿಮಾ ಚಿತ್ರ ಮಂದಿರದಲ್ಲಿ ಅದ್ದೂರಿಯಾಗಿ ನೆರವೇರಿತು. ಮಂಗಳೂರು ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಫಾ. ಡಾ. ಪೀಟರ್ ಪೌಲ್ ಸಲ್ಡಾನ ಅವರು ದೀಪಪ್ರಜ್ವಲನೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಪ್ರಿಯಾ ಮಾದ್ಯಮ ಕುಟುಂಬದ ಪ್ರಿಯ ಮೋನಿಕಾ, ವಿ.ಜೆ ಡಿಕ್ಸನ್, ನಟ ಅನೂಪ್, ಡೊಲ್ಲ ಮಂಗಳೂರು, ನಾರ್ಬರ್ಟ್ ಜಾನ್ ಡಿಸೋಜಾ, ಪ್ರಶಾಂತ್ ಸಿ.ಕೆ, ಜೆರೋಮ್ ಮೊರಾಸ್, ನಟಿ ವಿಯೋಳಾ, ಟಿಯೋನ ಡಿಸೋಜಾ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.

ಚಿತ್ರಕ್ಕೆ ಡೋಲ್ವಿನ್ ಕೊಳಲಗಿರಿ ಸಂಗೀತ ಸಂಯೋಜನೆ ಮಾಡಿದ್ದು, ಡೇನಿಯಲ್ ಜೈಸನ್ ಛಾಯಾಗ್ರಹಣ ನೀಡಿದ್ದಾರೆ. ದಾಯ್ಜಿವರ್ಲ್ಡ್ ಸ್ಟುಡಿಯೋದಲ್ಲಿ ಡಬ್ಬಿಂಗ್ ಕಾರ್ಯ ನಡೆದಿದ್ದು, ಮಂಗಳೂರಿನ ಸುತ್ತಮುತ್ತಲ ಪ್ರದೇಶಗಳಲ್ಲಿ ಚಿತ್ರೀಕರಣಗೊಂಡಿದೆ.

“ವಾಗಾನ್ಸೋ ಖೆಳ್” ಮೇ 1ರಂದು ಅಧಿಕೃತವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಕರಾವಳಿ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಸಿಗುವ ನಿರೀಕ್ಷೆ ವ್ಯಕ್ತವಾಗಿದೆ.

View this post on Instagram

A post shared by News Karnataka (@newskarnataka)