ನಟ ಸುದೀಪ್ ಅವರು “ಬಿಲ್ಲಾ ರಂಗ ಬಾಷ’ ಚಿತ್ರದಲ್ಲಿ ನಟಿಸುತ್ತಿದ್ದಾರೆ.ಈಗ ಸದ್ದಿಲ್ಲದೇ ಹೊಸ ಸಿನಿಮಾ ಒಪ್ಪಿಕೊಂಡು, ಶೂಟಿಂಗ್ ಅಖಾಡಕ್ಕೆ ಇಳಿದೇ ಬಿಟ್ಟಿದ್ದಾರೆ. ಇಂದಿನಿಂದ ಅವರ ಹೊಸ ಸಿನಿಮಾ ಶುರುವಾಗುತ್ತಿದೆ.
ಹಾಗಂತ ಇದು “ಮ್ಯಾಕ್ಸ್-2′ ಅಲ್ಲ. ಅದನ್ನು ಬದಿಗಿಟ್ಟು ಹೊಸ ಸಿನಿಮಾಕ್ಕೆ ಜೈ ಎಂದಿದ್ದಾರೆ. ತಮಿಳಿನ ಸತ್ಯಜ್ಯೋತಿ ಫಿಲಂಸ್ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದೆ. ಇದು ಸುದೀಪ್ ಅವರ 47ನೇ ಸಿನಿಮಾ.
ಈ ಕುರಿತು ಮಾತನಾಡುವ ಸುದೀಪ್, “ಮ್ಯಾಕ್ಸ್ ನಂತರ ನಾವು ಮತ್ತೆ ಒಂದಾಗಿದ್ದೇವೆ. ಸದ್ಯಕ್ಕೆ ಮ್ಯಾಕ್ಸ್ – 2 ಸಿನಿಮಾ ಕೈ ಬಿಟ್ಟಿದ್ದೇವೆ. ಈ ವರ್ಷ ಎರಡು ಸಿನಿಮಾ ಮಾಡುತ್ತೇವೆ. ಬಿಲ್ಲಾ ರಂಗ ಬಾಷ ಸಿನಿಮಾ ಈ ವರ್ಷ ರಿಲೀಸ್ ಆಗಲ್ಲ. ಆದರೆ ಈ ಸಿನಿಮಾ ಇದೇ ವರ್ಷ ಡಿಸೆಂಬರ್ 25 ಕ್ಕೆ ರಿಲೀಸ್ ಮಾಡುತ್ತೇವೆ. ಶನಿವಾರ, ಭಾನುವಾರ ಎನ್ನದೇ ಕೆಲಸ ಮಾಡಬೇಕಿದೆ. ಸೆಪ್ಟೆಂಬರ್ ಕೊನೆಯಲ್ಲಿ ಬಿಗ್ ಬಾಸ್ ಶುರು ಆಗುತ್ತದೆ. ತುಂಬಾ ಟೈಟ್ ಶೆಡ್ನೂಲ್‌ನಲ್ಲಿ ಕೆಲಸ ಮಾಡಬೇಕಿದೆ’ ಎನ್ನುತ್ತಾರೆ.
ಈ ಹಿಂದೆ ಸುದೀಪ್ ಅವರ “ಮ್ಯಾಕ್ಸ್’ ಸಿನಿಮಾವನ್ನು ತಮಿಳಿನ ಕಲೈಪುಲಿ ತನು ಅವರು ನಿರ್ಮಿಸಿದ್ದರು. ಈಗ ಹೊಸ ಸಿನಿಮಾವನ್ನು ತಮಿಳಿನ ಮತ್ತೊಂದು ನಿರ್ಮಾಣ ಸಂಸ್ಥೆ “ಸತ್ಯಜ್ಯೋತಿ ಫಿಲಂಸ್’ ನಿರ್ಮಾಣ ಮಾಡುತ್ತಿದೆ. ಇನ್ನು ಸುದೀಪ್ ಅವರ “ಬಿಲ್ಲಾ ರಂಗ ಬಾಷ’ ಸಿನಿಮಾವನ್ನು ತೆಲುಗಿನ ನಿರ್ಮಾಣ ಸಂಸ್ಥೆಯಾದ ಪ್ರೈಮ್ ಶೋ ಎಂಟರ್‌ಟೈನ್ಮೆಂಟ್ ನಿರ್ಮಿಸುತ್ತಿದೆ.

