ಚೆನ್ನೈ: ದಳಪತಿ ವಿಜಯ್ ನಟನೆಯ ಬಹುನಿರೀಕ್ಷಿತ ‘ಜನ ನಾಯಗನ್’ ಸಿನಿಮಾದ ಬಿಡುಗಡೆಗೆ ದಿನಾಂಕ ಕೊನೆಗೂ ಅಧಿಕೃತವಾಗಿದೆ. ಈ ರಾಜಕೀಯ ಆಕ್ಷನ್ ಡ್ರಾಮಾ ಸಿನಿಮಾ ಜುಲೈ 24, 2026 ರಂದು ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಬಿಡುಗಡೆಯಾಗಲಿದೆ.

ವಿಜಯ್ ತಮಿಳುನಾಡಿನ ಮುಖ್ಯಮಂತ್ರಿಯಾದ ನಂತರ ಅವರ ಕೊನೆಯ ಸಿನಿಮಾ ಎಂದೇ ಬಿಂಬಿತವಾಗಿರುವ ಈ ಚಿತ್ರದ ಬಗ್ಗೆ ಯಾವುದೇ ಅಪ್‌ಡೇಟ್‌ಗಳು ಸಿಗದೆ ಅಭಿಮಾನಿಗಳು ಕಾಯುತ್ತಿದ್ದರು. ಈಗ ಹೊಸ ಬಿಡುಗಡೆ ದಿನಾಂಕದ ಕುರಿತು ಚಿತ್ರತಂಡದಿಂದ ವಿದೇಶಿ ಹಂಚಿಕೆದಾರರಿಗೂ ಮಾಹಿತಿ ರವಾನೆಯಾಗಿದ್ದು, ಸಿನಿಮಾ ಬಿಡುಗಡೆಯ ಹಾದಿ ಸುಗಮವಾಗಿದೆ.

ಖ್ಯಾತ ನಿರ್ದೇಶಕ ಹೆಚ್. ವಿನೋದ್ ಆ್ಯಕ್ಷನ್ ಕಟ್ ಹೇಳಿರುವ ಈ ಬಿಗ್ ಬಜೆಟ್ ಸಿನಿಮಾವನ್ನು ಕೆವಿಎನ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಿಸಲಾಗಿದೆ. ಚಿತ್ರದಲ್ಲಿ ವಿಜಯ್ ಅವರಿಗೆ ಜೋಡಿಯಾಗಿ ಪೂಜಾ ಹೆಗ್ಡೆ ನಟಿಸಿದ್ದು, ಉಳಿದಂತೆ ಪ್ರಮುಖ ಪಾತ್ರಗಳಲ್ಲಿ ಮಮಿತಾ ಬೈಜು, ಬಾಬಿ ಡಿಯೋಲ್, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಮತ್ತು ನರೇನ್ ಕಾಣಿಸಿಕೊಂಡಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಧಮಾಕ ಸಂಗೀತ ಈ ಚಿತ್ರಕ್ಕಿರುವುದು ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದೆ.

ಇದೇ ಕೆವಿಎನ್ ಸಂಸ್ಥೆ ನಿರ್ಮಾಣ ಮಾಡಿರುವ ಮತ್ತೊಂದು ಬಹುನಿರೀಕ್ಷಿತ ಚಿತ್ರ ‘ಟಾಕ್ಸಿಕ್’ ಆಗಸ್ಟ್ 26ರಂದು ತೆರೆಗೆ ಬರಲು ಸಜ್ಜಾಗಿದೆ. ಈ ಸಿನಿಮಾವನ್ನು ಕನಿಷ್ಠ ಎರಡು ತಿಂಗಳು ಚಿತ್ರಮಂದಿರಗಳಲ್ಲಿ ಭರ್ಜರಿಯಾಗಿ ಓಡಿಸುವ ದೊಡ್ಡ ಪ್ಲ್ಯಾನ್ ಇರುವುದರಿಂದ, ಅದಕ್ಕಿಂತ ಒಂದು ತಿಂಗಳು ಮುಂಚಿತವಾಗಿಯೇ ‘ಜನ ನಾಯಗನ್’ ಚಿತ್ರವನ್ನು ತೆರೆಗೆ ತರಲು ಚಿತ್ರತಂಡ ನಿರ್ಧರಿಸಿದೆ.