ಹೇಮಾ ವರದಿ ಬೆನ್ನಲ್ಲೆ ಹಲವು ನಟಿಯರು ತಮಗೆ ಆಗಿರುವ ಕಹಿ ಅನುಭವದ ಬಗ್ಗೆ ಬಹಿರಂಗವಾಗಿ ಮಾತನಾಡಲು ಆರಂಭಿಸಿದ್ದಾರೆ. ಮಲಯಾಳಂನ ಕೆಲ ಹಿರಿಯ ನಿರ್ದೇಶಕ, ನಿರ್ಮಾಪಕರ ವಿರುದ್ಧ ದೌರ್ಜನ್ಯ ಪ್ರಕರಣಗಳು ದಾಖಲಾಗಿವೆ. ಇದರ ಬೆನ್ನಲ್ಲೆ, ಬಹುಭಾಷೆಗಳಲ್ಲಿ ನಟಿಸಿರುವ ಖ್ಯಾತ ನಟಿಯೊಬ್ಬರು, ತಮಗಾದ ಅತ್ಯಂತ ಭೀಕರ ಅನುಭವವನ್ನು ತೆರೆದಿಟ್ಟಿದ್ದಾರೆ.
ಖ್ಯಾತ ನಟ ಶರತ್ಕುಮಾರ್ ಪತ್ನಿ, ಮತ್ತು ಬಹುಜನಪ್ರಿಯ ನಟಿ ರಾಧಿಕಾ ಶರತ್ಕುಮಾರ್ ಅವರು ಹೇಮಾ ಕಮಿಟಿ ವರದಿ ಬಗ್ಗೆ ಮಾತನಾಡುತ್ತಾ, ನಾನು ಅತ್ಯಂತ ಭೀಕರ ಸನ್ನಿವೇಶಗಳನ್ನು ಎದುರಿಸಿದ್ದೇನೆ. ನಟಿಯರ ಬೆತ್ತಲೆ ಚಿತ್ರಗಳನ್ನು ಪಡೆಯಲು ಅವರು ಬಳಸುವ ಕ್ಯಾರವ್ಯಾನ್ಗಳಲ್ಲ ಸಿಸಿಟಿವಿ ಅಳವಡಿಸಲಾಗುತ್ತದೆ ಎಂದಿದ್ದಾರೆ. ‘ಒಮ್ಮೆ ನಾನು ಸಿನಿಮಾ ಒಂದರ ಚಿತ್ರೀಕರಣಕ್ಕಾಗಿ ಕೇರಳಕ್ಕೆ ಹೋಗಿದ್ದೆ. ಅಲ್ಲಿ ನನಗೆ ಕ್ಯಾರವ್ಯಾನ್ ನೀಡಲಾಗಿತ್ತು. ಅದನ್ನೇ ನಾನು ಸ್ನಾನಕ್ಕೆ, ಶೌಚಕ್ಕೆ, ಬಟ್ಟೆ ಬದಲಿಸಿಸಲು ಬಳಸುತ್ತಿದ್ದೆ’ ಎಂದಿದ್ದಾರೆ.
‘ಒಂದು ದಿನ ಕ್ಯಾರವ್ಯಾನ್ನಿಂದ ಹೊರಗೆ ಬಂದಾಗ ಕೆಲವು ಸೆಟ್ನ ಯುವಕರು ಮೊಬೈಲ್ನಲ್ಲಿ ಏನೋ ನೋಡುತ್ತಿರುವುದು ನನ್ನ ಗಮನಕ್ಕೆ ಬಂತು. ನಾನು ನನ್ನ ಅಸಿಸ್ಟೆಂಟ್ಗೆ ಹೇಳಿ ಆ ಯುವಕರು ಮೊಬೈಲ್ನಲ್ಲಿ ಏನು ನೋಡುತ್ತಿದ್ದಾರೆ ತಿಳಿದುಕೋ ಎಂದು ಹೇಳಿದೆ. ವಿಷಯ ಗೊತ್ತಾದಾಗ ನನಗೆ ಆತಂಕವಾಯ್ತು. ಆ ಯುವಕರು, ಕ್ಯಾರಾವ್ಯಾನ್ನಲ್ಲಿ ಅಳವಡಿಸಿರುವ ಸಿಸಿಟಿವಿಯ ದೃಶ್ಯಗಳನ್ನು ನೋಡುತ್ತಿದ್ದರಂತೆ’ ಎಂದಿದ್ದಾರೆ ರಾಧಿಕಾ.
ಕ್ಯಾರಾವ್ಯಾನ್ಗಳಲ್ಲಿ ಹಿಡನ್ ಕ್ಯಾಮೆರಾ ಅಳವಡಿಸುವ ವಿಷಯ ತಿಳಿದ ಮೇಲೆ ನಾನು ಕ್ಯಾರಾವ್ಯಾನ್ ಬಳಸುವುದೇ ಬಿಟ್ಟೆ. ಹೋಟೆಲ್ ರೂಂಗೆ ಹೋಗಿ ಬಟ್ಟೆ ಬದಲಿಸಲು ಆರಂಭಿಸಿದೆ. ಇದು ನನ್ನೊಬ್ಬಳ ಅನುಭವ ಅಲ್ಲ ಹಲವು ನಟಿಯರು ಈ ಸಮಸ್ಯೆ ಎದುರಿಸಿದ್ದಾರೆ. ನಟಿಯರು ಉಳಿದುಕೊಂಡಿದ್ದ ರೂಮಿನ ಬಾಗಿಲುಗಳನ್ನು ಪುರುಷರು ಹೇಗೆ ಬಡಿಯುತ್ತಾರೆ ಎಂದು ಕೆಲವು ನಟಿಯರು ನನ್ನ ಬಳಿ ಹೇಳಿಕೊಂಡಿದ್ದಾರೆ. ಸಹಾಯ ಮಾಡುವಂತೆ ಮನವಿ ಸಹ ಮಾಡಿದ್ದಾರೆ ಎಂದು ರಾಧಿಕಾ ಶರತ್ ಹೇಳಿಕೊಂಡಿದ್ದಾರೆ.

