‘ದೇವರ ಹೆಸರಲ್ಲಿ ಪ್ರಮಾಣ ಮಾಡುತ್ತೇನೆ..’ ಎಂಬುದು ಚಿತ್ರಸಾಹಿತಿ ವಿ. ನಾಗೇಂದ್ರ ಪ್ರಸಾದ್‌ ನಟಿಸುತ್ತಿರುವ ಹೊಸ ಚಿತ್ರದ ಶೀರ್ಷಿಕೆ. ಚಿತ್ರದ ಟೀಸರ್‌ ಅನ್ನು ಅವರ ಅಭಿನಂದನಾ ಸಮಾರಂಭ ‘ಕವಿರತ್ನ ಸಾರ್ಥಕ ಸುವರ್ಣ’ದಲ್ಲಿ ಸಂಗೀತ ನಿರ್ದೇಶಕ ಹಂಸಲೇಖ ಈಚೆಗೆ ಬಿಡುಗಡೆ ಮಾಡಿದರು.

ಚಿತ್ರದ ನಿರ್ದೇಶಕ ಗುರುಪ್ರಸಾದ್ ಚಂದ್ರಶೇಖರ್, ‘ಕನ್ನಡ ಭಾಷೆ ಮತ್ತು ಅದರ ಸುತ್ತ ನಡೆಯುವ ಸಾಮಾಜಿಕ-ರಾಜಕೀಯ ಬೆಳವಣಿಗೆಗಳನ್ನು ಆಧರಿಸಿದ ಕಥಾವಸ್ತುವನ್ನು ಚಿತ್ರ ಹೊಂದಿದೆ’ ಎಂದು ತಿಳಿಸಿದರು. ಚಿತ್ರಕಥೆ ಹಾಗೂ ಸಂಭಾಷಣೆಯನ್ನೂ ಅವರೇ ಬರೆದಿದ್ದಾರೆ.

‘ದೇವರ ಹೆಸರಲ್ಲಿ ಪ್ರಮಾಣ ಮಾಡುವ ಸಂಪ್ರದಾಯವು ಸಮಾಜದಲ್ಲಿ ಉಂಟುಮಾಡುವ ಪರಿಣಾಮಗಳು ಮತ್ತು ಕಾಲಕ್ಕೆ ತಕ್ಕಂತೆ ಬದಲಾಗುವ ಮಾನವೀಯ ಮೌಲ್ಯಗಳನ್ನು ಚಿತ್ರದ ಕಥೆ ಅನಾವರಣಗೊಳಿಸುತ್ತದೆ’ ಎಂದು ಅವರು ಹೇಳಿದರು.

ಚಿತ್ರಕ್ಕೆ ಚರಣ್ ಅರ್ಜುನ್ ಸಂಗೀತ ಸಂಯೋಜಿಸಿದ್ದು, ಶಿವಶಂಕರ್ ನೂರಂಬಡ ಛಾಯಾಗ್ರಹಣ ಹಾಗೂ ಮಧು ತುಂಬಕೆರೆ ಸಂಕಲನ ನಿರ್ವಹಿಸಿದ್ದಾರೆ. ಬಿ.ವಿ.ಎಂ. ಕ್ರಿಯೇಷನ್ಸ್‌ನ ಬಿ. ಶಿವಶಂಕರ್, ಡಿ.ಎಲ್.ವಿ. ಪ್ರೊಡಕ್ಷನ್ಸ್‌ನ ದತ್ತಾತ್ರೇಯ ಜಮಾದಾರ್ ಹಾಗೂ ಅನಿಕೇತನ ಪಿಕ್ಚರ್ಸ್‌ನ ಶಶಿಪ್ರಸಾದ್ ಚಂದ್ರಶೇಖರ್ ಜಂಟಿಯಾಗಿ ಚಿತ್ರ ನಿರ್ಮಿಸುತ್ತಿದ್ದು, ಶ್ರುತಿ ವಾಲೆ ಸಹ ನಿರ್ಮಾಪಕರಾಗಿದ್ದಾರೆ.

ಚಿತ್ರದಲ್ಲಿ ವೈಜನಾಥ್ ಬಿರಾದಾರ್, ಡಿಂಪನಾ ಜೀವನ್, ಅಶ್ವಿತಾ ಹೆಗಡೆ, ಬಲ ರಾಜವಾಡಿ, ಪ್ರದೀಪ್ ಪೂಜಾರಿ, ಶ್ರೀನಾಥ್ ವಶಿಷ್ಠ, ಶ್ರೀನಿವಾಸ್ ಪ್ರಭು, ಕಲಾಮಾಧ್ಯಮ ಪರಮೇಶ್ವರ್, ಅಂಕಿತಾ ಗೌಡ, ದತ್ತಾತ್ರೇಯ ಜಮಾದಾರ್, ಮಾವಳ್ಳಿ ಕಾರ್ತಿಕ್ ಅಭಿನಯಿಸಿದ್ದಾರೆ.