ಬೆಂಗಳೂರು: ಹೇಮಾ ಸಮಿತಿ ವರದಿ ಸಂಚಲನ ಸೃಷ್ಟಿ ಮಾಡಿದೆ. ಮಲಯಾಳಂ ಚಿತ್ರರಂಗದಲ್ಲಿ ಹೀರೋಯಿನ್ಗಳು ಎದುರಿಸುತ್ತಿರುವ ಲೈಂಗಿಕ ಕಿರುಕುಳ ಹಾಗೂ ಶೋಷಣೆಗಳ ಬಗ್ಗೆ ಈ ವರದಿಯಲ್ಲಿ ಉಲ್ಲೇಖ ಮಾಡಲಾಗಿದೆ. ಈ ವರದಿ 2019ರಲ್ಲೇ ಸರ್ಕಾರದ ಕೈ ಸೇರಿತ್ತು. ಈಗ ವರದಿಯ ವಿಚಾರಗಳನ್ನು ಬಹಿರಂಗ ಮಾಡಲಾಗಿದೆ. ಈ ಬಗ್ಗೆ ಅನೇಕರು ಮಾತನಾಡುತ್ತಿದ್ದಾರೆ. ಕನ್ನಡದ ನಟಿ ಶ್ರುತಿ ಹರಿಹರನ್ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಕನ್ನಡದಲ್ಲಿ ಈ ರೀತಿಯ ಸಮಿತಿಯ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ನನಗೆ ಹೇಮಾ ಸಮಿತಿಯ ವರದಿ ಬಗ್ಗೆ ತುಂಬಾನೇ ಗೌರವ ಇದೆ. ಇಷ್ಟು ದಿನಗಳಿಂದ ಈ ಬಗ್ಗೆ ನಾವು ಇದನ್ನು ಮುಚ್ಚುಮರೆಯಲ್ಲಿ ಮಾತನಾಡುತ್ತಿದ್ದೆವು. ಸೆಕ್ಷುವಲ್ ಫೇವರ್ ಅತಿಯಾಗಿದೆ ಎಂದು ಹೇಳುತ್ತಿದ್ದೆವು. ಈ ವಿಚಾರವನ್ನು ಆಪ್ತ ಬಳಗದಲ್ಲಿ ಕೆಲವರು ಜೋಕ್ ಕೂಡ ಮಾಡುತ್ತಿದ್ದರು. ಆದರೆ, ಈ ವಿಚಾರವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ ಎಂದರೆ ನಿಜಕ್ಕೂ ಹೆಮ್ಮೆಯ ವಿಚಾರ’ ಎಂದಿದ್ದಾರೆ ಅವರು.
ಈ ವರದಿ ಮಲಯಾಳಂ ಚಿತ್ರರಂಗದ ಗೌರವ ಕಡಿಮೆ ಮಾಡುತ್ತಿದೆ, ಮಲಯಾಳಂ ಚಿತ್ರರಂಗದ ಘನತೆಗೆ ಧಕ್ಕೆ ತಂದಿದೆ’ ಎಂದು ಮಾತನಾಡಿಕೊಂಡಿದ್ದೂ ಇದೆ. ಆದರೆ, ಇದನ್ನು ಶ್ರುತಿ ಹರಿಹರನ್ ತಪ್ಪು ಎಂದಿದ್ದಾರೆ. ‘ಇದು ಖಂಡಿತವಾಗಿಯೂ ತಪ್ಪು. ಆ ರೀತಿ ನೋಡಬಾರದು. ಸಿನಿಮಾ ಕಲೆಗೆ ಸಂಬಂಧಿಸಿದ್ದು. ಅದರೊಳಗೆ ಇರುವ ಕೆಲವ ವಿಚಾರಗಳನ್ನು ಸ್ವಚ್ಛ ಮಾಡಲು ಇದು ಸರಿಯಾದ ಸಮಯ. ನಮ್ಮ ಮನೆಯನ್ನು ನಾವು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು’ ಎಂದಿದ್ದಾರೆ ಶ್ರುತಿ ಹರಿಹರನ್.

