ಬಿಗ್ ಬಾಸ್ ಹಿಂದಿ ಸೀಸನ್ 20’ರ ಕಾಯುವಿಕೆಗೆ ತೆರೆ ಬಿದ್ದಿದೆ. ನಟ ಸಲ್ಮಾನ್ ಖಾನ್ ನಿರೂಪಣೆಯ ಈ ಬಹು ನಿರೀಕ್ಷಿತ ಕಾರ್ಯಕ್ರಮವು ಸೆಪ್ಟೆಂಬರ್ 6ರಿಂದ ಕಲರ್ಸ್ ಟಿವಿ ಹಾಗೂ ಜಿಯೋ ಹಾಟ್‌ಸ್ಟಾರ್‌ನಲ್ಲಿ ಪ್ರಸಾರವಾಗಲಿದೆ. ಶೋ ಆರಂಭದ ದಿನಾಂಕವನ್ನು ಪ್ರಕಟಿಸಿರುವ ನಿರ್ಮಾಪಕರು ಮೊದಲ ಪ್ರೋಮೋವನ್ನೂ ಬಿಡುಗಡೆ ಮಾಡಿದ್ದಾರೆ.
ಮೊದಲ ಪ್ರೋಮೋದಲ್ಲಿ ಸಲ್ಮಾನ್ ಖಾನ್ ಕುದುರೆಯ ಮೇಲೆ ಎಂಟ್ರಿ ಕೊಡುತ್ತಾರೆ. ಬಳಿಕ ತಮ್ಮ ಸೂಪರ್ ಹಿಟ್ ಸಿನಿಮಾ ಕರಣ್ ಅರ್ಜುನ್’ ಅನ್ನು ಉಲ್ಲೇಖಿಸುತ್ತಾ,ಜೋ ಕರಣ್ ಅರ್ಜುನ್ ಮೇ ಹುವಾ ಥಾ, ವೋಹ್ ಹೋಗಾ ಅಬ್ ಬಿಗ್ ಬಾಸ್ ಮೇ, ತಥಾಸ್ತು’ (ಕರಣ್ ಅರ್ಜುನ್‌ನಲ್ಲಿ ಏನಾಯಿತೋ ಅದು ಈಗ ಬಿಗ್ ಬಾಸ್‌ನಲ್ಲಿ ನಡೆಯಲಿದೆ) ಎಂದು ಹೇಳುವ ಮೂಲಕ ಅಭಿಮಾನಿಗಳ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ.
ಪ್ರೋಮೋಗೆ `ಏಕ್ ಸೇ ಭಲೆ ದೋ’ (ಒಬ್ಬರಿಗಿಂತ ಇಬ್ಬರು ಉತ್ತಮ) ಎಂಬ ಕ್ಯಾಪ್ಷನ್ ನೀಡಲಾಗಿದ್ದು, ಈ ಬಾರಿ ಶೋನಲ್ಲಿ ಹೊಸ ರೀತಿಯ ಟ್ವಿಸ್ಟ್‌ಗಳು ಇರಲಿವೆ ಎಂಬ ಸುಳಿವು ನೀಡಲಾಗಿದೆ. ಈ ಕುರಿತು ಸಲ್ಮಾನ್ ಖಾನ್ ಮಾತನಾಡಿದ್ದು, ಪ್ರತಿ ಸೀಸನ್‌ನಲ್ಲೂ ಹೊಸ ಆಟ ಮತ್ತು ಅನಿರೀಕ್ಷಿತ ತಿರುವುಗಳು ಇರುತ್ತವೆ. ಆದರೆ ಈ ಬಾರಿ ಶೋನಲ್ಲಿ ಒಂದು ದೊಡ್ಡ ರಹಸ್ಯವಿದೆ. ಅದರ ಮೊದಲ ಸುಳಿವನ್ನು ಈಗಾಗಲೇ ಬಿಡುಗಡೆ ಮಾಡಿದ್ದೇವೆ ಎಂದು ಹೇಳಿದ್ದಾರೆ.
ಈ ಬಾರಿ ಬಿಗ್ ಬಾಸ್ ಮನೆಯ ವಿನ್ಯಾಸದಲ್ಲೂ ದೊಡ್ಡ ಬದಲಾವಣೆ ಮಾಡಲಾಗುತ್ತಿದೆ ಎನ್ನಲಾಗಿದೆ. ಹಲವು ವರ್ಷಗಳಿಂದ ಶೋನ ಸೆಟ್ ವಿನ್ಯಾಸ ಮಾಡುತ್ತಿದ್ದ ಓಮುಂಗ್ ಕುಮಾರ್ ಮತ್ತು ವನಿತಾ ಗರುಡ್ ಕುಮಾರ್ ಅವರ ಬದಲಿಗೆ, `ದಿ 50′ ರಿಯಾಲಿಟಿ ಶೋಗೆ ಕೆಲಸ ಮಾಡಿದ್ದ ಆರ್ಟ್ ಡೈರೆಕ್ಟರ್‌ಗಳಾದ ಕಂಚನ್ ಮತ್ತು ರೂಪಾಲಿ ಅವರಿಗೆ ಜವಾಬ್ದಾರಿ ನೀಡಲಾಗಿದೆ ಎಂದು ವರದಿಗಳು ತಿಳಿಸಿವೆ.
ಈ ಸೀಸನ್‌ನ ಸ್ಪರ್ಧಿಗಳ ಪಟ್ಟಿಯೂ ಈಗಾಗಲೇ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ವರದಿಗಳ ಪ್ರಕಾರ, ಮಾಹಿ ವಿಜ್, ಗೀತಾ ಬಸ್ರಾ, ಜನ್ನತ್ ಜುಬೈರ್, ಫೈಸಲ್ ಶೇಖ್ (ಮಿಸ್ಟರ್ ಫೈಸು), ಸುನಿಲ್ ಪಾಲ್, ನಿಯಾ ಶರ್ಮಾ, ಪರ್ಲ್ ವಿ ಪುರಿ ಹಾಗೂ ಶೋವಿಕ್ ಚಕ್ರವರ್ತಿ ಅವರ ಹೆಸರುಗಳು ಕೇಳಿಬರುತ್ತಿವೆ. ಇದಲ್ಲದೆ ಅರ್ಬಾಜ್ ಪಟೇಲ್, ಭಾಗೀರಥ್ ಭಟ್, ಭವ್ಯಾ ಸಿಂಗ್, ರುರು ಠಾಕೂರ್ ಮತ್ತು ತುಷಾರ್ ಕರ್ವಾರ್ ಅವರನ್ನೂ ಸ್ಪರ್ಧಿಗಳ ಪಟ್ಟಿಗೆ ಪರಿಗಣಿಸಲಾಗುತ್ತಿದೆ ಎನ್ನಲಾಗಿದೆ.

