ಹಲವು ವಿವಾದಕ್ಕೆ ಕಾರಣ ಆಗಿರುವ ‘ಹಮಾರೆ ಬಾರಾಹ್’ ಸಿನಿಮಾದ ಬಿಡುಗಡೆಗೆ ವಿಘ್ನ ಎದುರಾಗಿತ್ತು.ಆದರೆ ಈಗ ಈ ಸಿನಿಮಾದ ನಿರ್ಮಾಪಕರ ಪರವಾಗಿ ಕೋರ್ಟ್ ತೀರ್ಪು ನೀಡಿದೆ. ಸಿನಿಮಾದಲ್ಲಿ ಕೆಲವು ಆಕ್ಷೇಪಾರ್ಹ ದೃಶ್ಯಗಳನ್ನು ತೆಗೆದುಹಾಕಲು ನಿರ್ಮಾಪಕರು ಒಪ್ಪಿದ್ದಾರೆ. ಹಾಗಾಗಿ ಈ ಸಿನಿಮಾದ ಬಿಡುಗಡೆಗೆ ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ. ಆರಂಭದಲ್ಲಿ ಈ ಸಿನಿಮಾದ ಶೀರ್ಷಿಕೆಗೆ ವಿರೋಧ ವ್ಯಕ್ತವಾಗಿತ್ತು. ಬಳಿಕ ಟೈಟಲ್ ಬದಲಾಯಿಸಲಾಯಿತು.
ಮುಸ್ಲಿಂ ಧರ್ಮದವರ ಭಾವನೆಗಳಿಗೆ ‘ಹಮಾರೆ ಬಾರಾಹ್’ ಸಿನಿಮಾ ಧಕ್ಕೆ ಉಂಟು ಮಾಡಲಿದೆ ಎಂದು ಕೆಲವರು ತಕರಾರು ತೆಗೆದಿದ್ದರು. ಅಲ್ಲದೇ, ಖುರಾನ್ನ ಭೋದನೆಗಳನ್ನು ತಪ್ಪಾಗಿ ಅರ್ಥೈಸಿದೆ ಎಂದು ಕಿರಿಕ್ ಮಾಡಲಾಗಿತ್ತು. ಆದರೆ ಈ ಸಿನಿಮಾದಲ್ಲಿ ಆ ರೀತಿಯ ಯಾವುದೇ ಅಂಶಗಳು ಇಲ್ಲ ಎಂಬುದನ್ನು ಮನಗಂಡ ಬಳಿಕ ಬಾಂಬೆ ಹೈಕೋರ್ಟ್ ಈ ಆದೇಶ ನೀಡಿದೆ.
ಈ ಸಿನಿಮಾದ ಟ್ರೇಲರ್ ಬಿಡುಗಡೆ ಆದ ನಂತರ ವಿವಾದ ಸೃಷ್ಟಿಯಾಗಿತ್ತು. ಸಿನಿಮಾದಲ್ಲಿನ ಕೆಲವು ದೃಶ್ಯಗಳನ್ನು ಡಿಲೀಟ್ ಮಾಡಬೇಕು ಎಂಬ ಒತ್ತಾಯ ಕೇಳಿಬಂತು. ನ್ಯಾಯಾಲಯದ ಸೂಚನೆ ಮೇರೆಗೆ ನಿರ್ಮಾಪಕರು ಆ ದೃಶ್ಯಗಳನ್ನು ಸಿನಿಮಾದಿಂದ ತೆಗೆದು ಹಾಕಲು ಒಪ್ಪಿದ್ದಾರೆ. ಆದ್ದರಿಂದ ಸಿನಿಮಾದ ಬಿಡುಗಡೆಗೆ ಅನುಮತಿ ಸಿಕ್ಕಿದೆ.

