ಲಹರಿ ಫಿಲಂಸ್ ನಿರ್ಮಾಣದ, ದೇವನೂರು ಚಂದ್ರು ಕಥೆ-ಚಿತ್ರಕಥೆ ಬರೆದು ನಿರ್ದೇಶಿಸಿರುವ ‘ಗ್ರಾಮಾಯಣ’ ಚಿತ್ರದ ಟ್ರೈಲರ್‌ಗೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ವಿನಯ್ ರಾಜಕುಮಾರ್ ಹಾಗೂ ಮೇಘ ಶೆಟ್ಟಿ ನಾಯಕ-ನಾಯಕಿಯಾಗಿ ನಟಿಸಿರುವ ಈ ಸಿನಿಮಾ ಜುಲೈ 3ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ನಟ ದುನಿಯಾ ವಿಜಯ್ ಹಾಗೂ ದಿವಂಗತ ನಟಿ ಅಪರ್ಣ ಅವರ ಪತಿ ನಾಗರಾಜ್ ವಸ್ತಾರೆ ಟ್ರೈಲರ್ ಬಿಡುಗಡೆ ಮಾಡಿದರು. ರಾಘವೇಂದ್ರ ರಾಜಕುಮಾರ್, ಮಂಗಳ ರಾಘವೇಂದ್ರ ರಾಜಕುಮಾರ್, ಹಂಸಲೇಖ, ಯುವ ರಾಜಕುಮಾರ್, ನವೀನ್ ಶಂಕರ್, ನಿರ್ದೇಶಕ ಸಿಂಪಲ್ ಸುನಿ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ನಟ ದುನಿಯಾ ವಿಜಯ್, ನನಗೆ ವಿನಯ್ ರಾಜಕುಮಾರ್ ಎಂದರೆ ತುಂಬಾ ಇಷ್ಟ. ಟ್ರೈಲರ್ ಅದ್ಭುತವಾಗಿ ಮೂಡಿಬಂದಿದೆ. ದೇವನೂರು ಚಂದ್ರು ಒಳ್ಳೆಯ ನಿರ್ದೇಶಕ. ಈ ಚಿತ್ರ ದೊಡ್ಡ ಯಶಸ್ಸು ಕಾಣಲಿ, ಎಂದು ಹಾರೈಸಿದರು.

ದಿವಂಗತ ನಟಿ ಅಪರ್ಣ ಅವರ ಪತಿ ನಾಗರಾಜ್ ವಸ್ತಾರೆ ಮಾತನಾಡಿ, ಚಿತ್ರೀಕರಣ ಮುಗಿಸಿ ಬಂದ ಬಳಿಕ ಅಪರ್ಣ ಚಿತ್ರದ ಬಗ್ಗೆ ನನ್ನೊಂದಿಗೆ ಮಾತನಾಡುತ್ತಿದ್ದರು. ಇಂದು ಅವರಿಲ್ಲದೆ ಅವರ ಅಭಿನಯದ ಚಿತ್ರದ ಟ್ರೈಲರ್ ಬಿಡುಗಡೆ ಮಾಡುತ್ತಿರುವುದು ತುಂಬಾ ಬೇಸರದ ಸಂಗತಿ. ‘ಗ್ರಾಮಾಯಣ’ ದೊಡ್ಡ ಯಶಸ್ಸು ಕಾಣಲಿ, ಎಂದರು.

ರಾಘವೇಂದ್ರ ರಾಜಕುಮಾರ್ ಜುಲೈ 3ರಂದು ಸಿನಿಮಾ ಬಿಡುಗಡೆಯಾಗುತ್ತಿದೆ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ನೋಡಿ, ಬೆಂಬಲ ನೀಡಿ ಎಂದು ಮನವಿ ಮಾಡಿದರು.

ಯುವ ರಾಜಕುಮಾರ್ ಅಣ್ಣನ ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು. ನಟ ನವೀನ್ ಶಂಕರ್ ಕೂಡ ಚಿತ್ರತಂಡಕ್ಕೆ ಶುಭ ಕೋರಿದರು.

ನಿರ್ಮಾಪಕ ನವೀನ್ ಮನೋಹರ್ ಮಾತನಾಡಿ, ‘ಗ್ರಾಮಾಯಣ’ ಟ್ರೈಲರ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಸಿನಿಮಾ ಅದಕ್ಕಿಂತಲೂ ಚೆನ್ನಾಗಿ ಮೂಡಿಬಂದಿದೆ ಎಂದರು.

ನಾಯಕ ವಿನಯ್ ರಾಜಕುಮಾರ್ ಮಾತನಾಡಿ, ಈ ಚಿತ್ರದಲ್ಲಿ ನಾನು ಈವರೆಗೆ ಮಾಡದ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಚಿತ್ರದ ಬಗ್ಗೆ ಹೆಚ್ಚು ಹೇಳುವುದಿಲ್ಲ. ಆದರೆ ಪ್ರೇಕ್ಷಕರು ಕೊಟ್ಟ ದುಡ್ಡಿಗೆ ಮೋಸವಾಗದ ಸಿನಿಮಾ ಇದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ನಿರ್ದೇಶಕ ದೇವನೂರು ಚಂದ್ರು ಮಾತನಾಡುವ ವೇಳೆ ಭಾವುಕರಾದರು. ಈ ಸಿನಿಮಾ ಆರಂಭವಾಗಿ ಹಲವು ವರ್ಷಗಳಾಗಿವೆ. ಆದರೆ ಪ್ರತಿಯೊಂದು ಕೆಲಸಕ್ಕೂ ಸರಿಯಾದ ಸಮಯ ಬರುತ್ತದೆ. ಲಹರಿ ಫಿಲಂಸ್ ಈ ಚಿತ್ರವನ್ನು ಅದ್ದೂರಿಯಾಗಿ ನಿರ್ಮಿಸಿದೆ. ನಿರ್ಮಾಪಕರು, ಕಲಾವಿದರು ಹಾಗೂ ತಂತ್ರಜ್ಞರಿಗೆ ನಾನು ಸದಾ ಋಣಿ ಎಂದು ಹೇಳಿದರು.

ನಟಿ ಮೇಘ ಶೆಟ್ಟಿ ಸೇರಿದಂತೆ ಚಿತ್ರತಂಡದ ಸದಸ್ಯರಾದ ಅರುಣ್ ಸಾಗರ್, ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ, ಛಾಯಾಗ್ರಾಹಕ ಸಂತೋಷ್ ರೈ ಪಾತಾಜೆ, ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ, ನೃತ್ಯ ನಿರ್ದೇಶಕ ಮುರಳಿ ಮಾಸ್ಟರ್ ಹಾಗೂ ಗೀತರಚನೆಕಾರ ಪ್ರಮೋದ್ ಮರವಂತೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರದ ಕುರಿತು ಮಾತನಾಡಿದರು.

‘ಗ್ರಾಮಾಯಣ’ ಚಿತ್ರದಲ್ಲಿ ವಿನಯ್ ರಾಜಕುಮಾರ್, ಮೇಘ ಶೆಟ್ಟಿ, ಲೂಸ್ ಮಾದ ಯೋಗೀಶ್, ಅಚ್ಯುತಕುಮಾರ್, ಗೋಪಾಲಕೃಷ್ಣ ದೇಶಪಾಂಡೆ, ಅರುಣ್ ಸಾಗರ್, ಬಲ ರಾಜವಾಡಿ, ಅಪರ್ಣ ವಸ್ತಾರೆ, ಸೀತಾ ಕೋಟೆ, ಪ್ರಶಾಂತ್ ಹೊನ್ನಾಳಿ ಹಾಗೂ ಅವಿನಾಶ್ ರೈ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.