ನೂರಾರು ಪ್ರಯಾಣಿಕರ ಜೀವ ಉಳಿಸಿದ ಫ್ಲೈದುಬೈ ಪೈಲಟ್, ಭಾರತೀಯ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಸಾಹಸಕ್ಕೆ ಬಾಲಿವುಡ್ ನಟ ಸಲ್ಮಾನ್ ಖಾನ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಲ್ಮಾನ್ ಖಾನ್, ‘ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರೊಂದಿಗೆ ಕೆಲಸ ಮಾಡಲು ಹೆಮ್ಮೆಯಾಗುತ್ತದೆ. ನಿಮಗೆ ನಮ್ಮೆಲ್ಲರ ಸಲ್ಯೂಟ್, ಅಭಿನಂದನೆಗಳು’ ಎಂದು ಶ್ಲಾಘಿಸಿದ್ದಾರೆ.
ಸದ್ಯ ಜಾಗತಿಕವಾಗಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿರುವ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ‘ನಿಜವಾದ ಹೀರೊ’ ಎಂದು ಬಣ್ಣಿಸಿದ್ದಾರೆ. ಅಷ್ಟೇ ಅಲ್ಲದೆ, ಅವರ ಈ ಸಾಹಸವನ್ನು ಗೌರವಿಸಿ ‘ಗುಜರಾತ್ ಗರಿಮಾ ಪ್ರಶಸ್ತಿ’ ನೀಡುವುದಾಗಿ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಘೋಷಿಸಿದ್ದಾರೆ.
ದುಬೈನಿಂದ ಟೆಲ್ ಅವೀವ್‌ಗೆ ತೆರಳುತ್ತಿದ್ದ ಫ್ಲೈದುಬೈನ ‘ಎಫ್‌ಝಡ್ 1073’ ವಿಮಾನದಲ್ಲಿದ್ದ ಒಮಾನ್ ಮೂಲದ ಸಹ-ಪೈಲಟ್, ವಿಮಾನವನ್ನು ಅಪಘಾತಕ್ಕೀಡು ಮಾಡಲು ಸಂಚು ರೂಪಿಸಿದ್ದ ಶಂಕೆ ವ್ಯಕ್ತವಾಗಿದೆ ಎಂದು ಇಸ್ರೇಲ್ ಅಧಿಕಾರಿಗಳನ್ನು ಉಲ್ಲೇಖಿಸಿ ‘ವೈನೆಟ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಹ-ಪೈಲಟ್‌ನ ಈ ದುಷ್ಕೃತ್ಯವನ್ನು ತಡೆಯಲು ಭಾರತೀಯ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರು ತೀವ್ರವಾಗಿ ಹೋರಾಡಿದರು. ನಂತರ ವಿಮಾನದಲ್ಲಿದ್ದ ಇಸ್ರೇಲ್ ಪ್ರಯಾಣಿಕರು ಸಹ-ಪೈಲಟ್‌ನನ್ನು ಹಿಡಿದು ನಿಯಂತ್ರಿಸಲು ನೆರವಾದರು ಎಂದು ವರದಿಯಾಗಿದೆ.

