ಉಡುಪಿ: ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಿಯ ದರ್ಶನ ಪಡೆದ ಬಳಿಕ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರು ದೇವಸ್ಥಾನದ ಹೊರಭಾಗದಲ್ಲಿ ನೆರೆದಿದ್ದ ಅಭಿಮಾನಿಗಳತ್ತ ತೆರಳಿ ನಮಸ್ಕರಿಸಿದರು.
ವಿಜಯ್ ಅವರನ್ನು ನೋಡಲು ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಜಮಾಯಿಸಿದ್ದರು. ವಿಜಯ್ ದೇಗುಲದಿಂದ ಹೊರಬರುತ್ತಿದ್ದಂತೆಯೇ ಅಭಿಮಾನಿಗಳು ಜೈಕಾರ ಕೂಗಿ ಸಂಭ್ರಮ ವ್ಯಕ್ತಪಡಿಸಿದರು. ಭದ್ರತಾ ಸಿಬ್ಬಂದಿಯ ಸಮ್ಮುಖದಲ್ಲೇ ಅವರು ಅಭಿಮಾನಿಗಳತ್ತ ತೆರಳಿ ಶುಭಾಶಯ ವಿನಿಮಯ ಮಾಡಿಕೊಂಡರು.
ಈ ವೇಳೆ ಅಭಿಮಾನಿಗಳತ್ತ ಕೈಮುಗಿದು ನಮಸ್ಕರಿಸಿದ ವಿಜಯ್, ಬಳಿಕ ದೇವಸ್ಥಾನದ ಮುಂಭಾಗದ ರಸ್ತೆಯುದ್ದಕ್ಕೂ ನೆರೆದಿದ್ದ ಜನರತ್ತ ಕೈಬೀಸುತ್ತ ಸಾಗಿದರು. ಅವರ ಆಗಮನದಿಂದ ಉತ್ಸಾಹಗೊಂಡ ಅಭಿಮಾನಿಗಳು ಜೈಕಾರ ಕೂಗಿ ಸಂಭ್ರಮಿಸಿದರು. ವಿಜಯ್ ಅವರ ಭೇಟಿಯ ಹಿನ್ನೆಲೆಯಲ್ಲಿ ದೇವಸ್ಥಾನ ಪರಿಸರದಲ್ಲಿ ಬಿಗಿ ಭದ್ರತಾ ವ್ಯವಸ್ಥೆ ಕಲ್ಪಿಸಲಾಗಿತ್ತು.

