ಚೆನ್ನೈ: ದಕ್ಷಿಣ ಭಾರತೀಯ ಚಿತ್ರರಂಗದ ದಂತಕಥೆ, ಚಿತ್ರಕಥೆಯ ರಾಜ ಎಂದೇ ಪ್ರಸಿದ್ಧರಾಗಿದ್ದ ಹಿರಿಯ ನಟ, ನಿರ್ದೇಶಕ ಮತ್ತು ನಿರ್ಮಾಪಕ ಕೆ. ಭಾಗ್ಯರಾಜ್ (73) ಅವರು ಶನಿವಾರ ಚೆನ್ನೈನಲ್ಲಿ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಹಠಾತ್ ಆರೋಗ್ಯ ವೈಪರೀತ್ಯದಿಂದಾಗಿ ಅವರನ್ನು ಅಪೊಲೊ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ. ತಮಿಳು ಚಿತ್ರರಂಗದ ಸರ್ವಕಾಲಿಕ ಶ್ರೇಷ್ಠ ತಂತ್ರಜ್ಞರಲ್ಲಿ ಒಬ್ಬರಾದ ಭಾಗ್ಯರಾಜ್, ಕೇವಲ ನಟನೆಯಷ್ಟೇ ಅಲ್ಲದೆ ಸಿನಿಮಾ ನಿರ್ದೇಶನ ಹಾಗೂ ಅದ್ಭುತ ಚಿತ್ರಕಥೆಗಳಿಗೆ ಹೆಸರಾಗಿದ್ದರು.

ಮಧ್ಯಮ ವರ್ಗದ ಕಥೆಗಳು ಹಾಗೂ ಹಾಸ್ಯಭರಿತ ಸಂಭಾಷಣೆಗಳ ಮೂಲಕ ಸಿನಿಮಾ ರಂಗದಲ್ಲಿ ಹೊಸ ಸಂಚಲನ ಮೂಡಿಸಿದ್ದರು. ಇತ್ತೀಚೆಗಷ್ಟೇ ಹಿರಿಯ ನಿರ್ದೇಶಕ ಭಾರತಿರಾಜ ಅವರ ನಿಧನದ ಬೆನ್ನಲ್ಲೇ ಈಗ ಭಾಗ್ಯರಾಜ್ ಅವರೂ ಇಹಲೋಕ ತ್ಯಜಿಸಿರುವುದು ಇಡೀ ದಕ್ಷಿಣ ಚಿತ್ರರಂಗವನ್ನು ತೀವ್ರ ಶೋಕ ಸಾಗರದಲ್ಲಿ ಮುಳುಗಿಸಿದೆ.

ವಿಶೇಷವೆಂದರೆ, ತಮಿಳು ಮಾತ್ರವಲ್ಲದೆ ಭಾರತದ ಪ್ರಮುಖ ಭಾಷೆಗಳಲ್ಲಿ ಗುರುತಿಸಿಕೊಂಡಿದ್ದ ಕೆ. ಭಾಗ್ಯರಾಜ್ ಅವರು ಕನ್ನಡ ಚಿತ್ರರಂಗದೊಂದಿಗೂ ನಂಟು ಹೊಂದಿದ್ದರು. 2015 ರಲ್ಲಿ ತೆರೆಕಂಡಿದ್ದ ‘ರೆಡ್ ಅಲರ್ಟ್’ ಕನ್ನಡ ಸಿನಿಮಾದಲ್ಲಿ ಪ್ರಮುಖ ಅತಿಥಿ ಪಾತ್ರವೊಂದರಲ್ಲಿ ನಟಿಸುವ ಮೂಲಕ ಕನ್ನಡ ಪ್ರೇಕ್ಷಕರನ್ನೂ ರಂಜಿಸಿದ್ದರು.