ಫಿಲ್ಮ್ ಚೇಂಬರ್​​ನಲ್ಲಿ ಇಂದು ಸೋನು ನಿಗಮ್ ವಿವಾದದ ಕುರಿತು ಸಭೆ ನಡೆದಿದ್ದು, ಸಂಗೀತ ಸಂಯೋಜಕರ ಸಂಘ, ನಿರ್ದೇಶಕರ ಸಂಘ, ನಿರ್ಮಾಪಕರ ಸಂಘಗಳು ಭಾಗಿಯಾಗಿದ್ದವು. ಸಭೆಯಲ್ಲಿ ಒಮ್ಮತದಿಂದ ಸೋನು ನಿಗಮ್​​ರನ್ನು ಸ್ಯಾಂಡಲ್​ವುಡ್​​ನಿಂದ ನಿಷೇಧಿಸಲು ನಿರ್ಧರಿಸಲಾಗಿದೆ.

ಕನ್ನಡ ಹಾಡು ಕೇಳಿದಕ್ಕೆ ಪೆಹಲ್ಗಾಮ್​ ದಾಳಿ ಜೊತೆಗೆ ಹೋಲಿಕೆ ಮಾಡಿದ್ದ ಸೋನು ನಿಗಮ್ ಮೇಲೆ ಕನ್ನಡಪರ ಸಂಘಟನೆಗಳು ಕೆರಳಿ ಕೆಂಡವಾಗಿದ್ದವು. ಕ್ಷಮೆ ಕೇಳುವ ಬದಲು ಸಮರ್ಥನೆ ಮಾಡಿಕೊಂಡು ಉದ್ದಟತನ ಮೆರೆದಿದ್ದಾರೆ ಎಂದು ಟೀಕೆಗಳು ವ್ಯಕ್ತವಾಗಿದ್ದವು. ಅದರ ಬೆನ್ನಲ್ಲೇ ಫಿಲಂ ಚೇಂಬರ್ ಈ ನಿರ್ಧಾರ ಕೈಗೊಂಡಿದೆ.

ಇತ್ತೀಚೆಗೆ ಸೋನು ನಿಗಮ್ ತಮ್ಮ ಹೊಸ ಹಿಂದಿ ಹಾಡು ಸುನ್ ಝರಾ ಪ್ರಚಾರಕ್ಕಾಗಿ ಬೆಂಗಳೂರಿಗೆ ಬಂದಿದ್ದರು. ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಿದ್ದಾಗ, ಯುವಕನೋರ್ವ ಕನ್ನಡದ ಹಾಡು ಹಾಡಿ ಎಂದು ಪ್ಲಕಾರ್ಡ್ ಪ್ರದರ್ಶಿಸಿದ್ದ. ಈ ವೇಳೆ ಕೆರಳಿದ ಸೋನು ನಿಗಮ್, ಕನ್ನಡಿಗರ ಭಾವನೆಗಳಿಗೆ ಧಕ್ಕೆ ತರುವಂತಹ ಕೆಲವು ಮಾತುಗಳನ್ನಾಡಿದ್ದರು. ಆ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿ, ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿತ್ತು.