ಮಲಯಾಳಂ ಖ್ಯಾತ ನಟ ವಿನಾಯಕನ್ ಅವರನ್ನು ಹೈದರಾಬಾದ್​ನಲ್ಲಿ ಇಂದು ಬಂಧಿಸಲಾಗಿದೆ. ಹೈದರಾಬಾದ್​ನ ರಾಜೀವ್ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಸಿಬ್ಬಂದಿಯ ಮೇಲೆ ಹಿನ್ನೆಲೆಯಲ್ಲಿ ವಿನಾಯಕನ್ ಅವರನ್ನು ಏರ್​ಪೋರ್ಟ್ ಪೊಲೀಸರು ಬಂಧಿಸಿದ್ದಾರೆ.

ಏರ್​ಪೋರ್ಟ್​ ಭದ್ರತೆ ಸಿಬ್ಬಂದಿ ನೀಡಿರುವ ದೂರಿನ ಆಧಾರದ ಮೇಲೆ ಎಫ್​ಐಆರ್ ಸಹ ದಾಖಲಾಗಿದೆ. ಗೋವಾಕ್ಕೆ ಹೋಗುತ್ತಿದ್ದ ವಿನಾಯಕನ್, ಕನೆಕ್ಟಿಂಗ್ ಫ್ಲೈಟ್​ ಹತ್ತಲೆಂದು ಹೈದರಾಬಾದ್​ನಲ್ಲಿ ಇಳಿದಾಗ ವಿಮಾನ ನಿಲ್ದಾಣದ ಸಿಐಎಸ್​ಎಫ್ ಸಿಬ್ಬಂದಿ ಒಬ್ಬರೊಟ್ಟಿಗೆ ಜಗಳ ಮಾಡಿಕೊಂಡಿದ್ದು, ಹಲ್ಲೆ ಸಹ ಮಾಡಿದ್ದಾರೆ ಎಂದು ಏರ್​ಪೋರ್ಟ್​ ಭದ್ರತೆ ಸಿಬ್ಬಂದಿ ಆರೋಪ ಮಾಡಿದ್ದಾರೆ.

ಆದರೆ ಮಲಯಾಳಂ ಪತ್ರಿಕೆ ಮನೋರಮಾ ಜೊತೆಗೆ ಮಾತನಾಡಿರುವ ವಿನಾಯಕನ್, ವ್ಯತಿರಿಕ್ತ ಹೇಳಿಕೆ ನೀಡಿದ್ದು, ಸಿಐಎಸ್​ಎಫ್ ಸಿಬ್ಬಂದಿಯೇ ತಮ್ಮ ಮೇಲೆ ಹಲ್ಲೆ ಮಾಡಿದ್ದಾರೆಂದು ಹೇಳಿದ್ದಾರೆ. ಮನೋರಮಾಕ್ಕೆ ವಿನಾಯಕನ್ ನೀಡಿರುವ ಹೇಳಿಕೆಯಂತೆ, ಅವರು ಗೋವಾಕ್ಕೆ ತೆರಳುತ್ತಿದ್ದ ಹೈದರಾಬಾದ್​ನಲ್ಲಿ ಇಳಿದಿದ್ದಾರೆ. ಸಿಐಎಸ್​ಎಫ್ ಸಿಬ್ಬಂದಿ ಕೆಲವರು ಅವರನ್ನು ಒಂದು ಕೋಣೆಗೆ ಕರೆದುಕೊಂಡು ಹೋಗಿ ಹಿಗ್ಗಾ-ಮುಗ್ಗ ಥಳಿಸಿದರಂತೆ.

ಸಣ್ಣ ವಿಷಯಕ್ಕೆ ಭದ್ರತಾ ಸಿಬ್ಬಂದಿ ಜೊತೆಗೆ ವಿನಾಯಕನ್ ಜಗಳ ಮಾಡಿದ್ದಕ್ಕೆ ತಮಗೆ ಹೀಗೆ ಥಳಿಸಿದ್ದಾರೆಂದು ಅವರೇ ಹೇಳಿಕೊಂಡಿದ್ದಾರೆ. ‘ನಾನು ಯಾವುದೇ ತಪ್ಪು ಮಾಡಿಲ್ಲ ಬೇಕಿದ್ದರೆ ಸಾಕ್ಷ್ಯವಾಗಿ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಬಹುದು’ ಎಂದು ವಿನಾಯಕನ್ ಹೇಳಿದ್ದಾಗಿ ಮನೋರಮಾ ವರದಿ ಮಾಡಿದೆ.