ಡಾಲಿ ಧನಂಜಯ ನಟನೆಯ‘ಅಣ್ಣ ಫ್ರಮ್ ಮೆಕ್ಸಿಕೋ’ ಸಿನಿಮಾ ಡಿಸೆಂಬರ್ 24ರಂದು ತೆರೆಕಾಣಲಿದೆ. ಸಿನಿಮಾವನ್ನು ಧನಂಜಯ ಅವರು ನಟಿಸಿದ್ದ ‘ಬಡವ ರಾಸ್ಕಲ್’ ಸಿನಿಮಾ ನಿರ್ದೇಶಿಸಿದ್ದ ಶಂಕರ್ ಗುರು ನಿರ್ದೇಶಿಸಿದ್ದಾರೆ. 2021ರ ಡಿಸೆಂಬರ್ ತಿಂಗಳಲ್ಲೇ ‘ಬಡವ ರಾಸ್ಕಲ್’ ಬಿಡುಗಡೆಯಾಗಿತ್ತು. ಐದು ವರ್ಷಗಳ ಬಳಿಕ ಇದೇ ಕಾಂಬಿನೇಷನ್‌ನಲ್ಲಿ ಮತ್ತೊಂದು ಸಿನಿಮಾ ಬರಲಿದೆ. ‘ಬಡವ ರಾಸ್ಕಲ್’ ಚಿತ್ರದ ಮೂಲಕವೇ ಧನಂಜಯ ತಮ್ಮ ‘ಡಾಲಿ ಪಿಕ್ಚರ್ಸ್’ ನಿರ್ಮಾಣ ಸಂಸ್ಥೆಯನ್ನು ಆರಂಭಿಸಿದ್ದರು.
ಆ್ಯಕ್ಷನ್ ಜೊತೆಗೆ ಫ್ಯಾಮಿಲಿ ಎಂಟರ್‌ಟೇನರ್ ಅಂಶಗಳನ್ನು ಹೊಂದಿರುವ ಈ ಸಿನಿಮಾದಲ್ಲಿ ಧನಂಜಯ ಅವರಿಗೆ ಜೋಡಿಯಾಗಿ ರೀಷ್ಮಾ ನಾಣಯ್ಯ ನಟಿಸಿದ್ದಾರೆ. ರಂಗಾಯಣ ರಘು, ನಾಗಭೂಷಣ ಹಾಗೂ ಪೂರ್ಣಚಂದ್ರ ಮೈಸೂರು ತಾರಾಬಳಗದಲ್ಲಿದ್ದಾರೆ.
ಲೂಸ್ ಮಾದ ಯೋಗಿ ಅವರೂ ಈ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿದ್ದಾರೆ. ಐರಾ ಫಿಲ್ಮ್ಸ್ ಹಾಗೂ ರಾಯಲ ಸ್ಟುಡಿಯೊಸ್ ಜಂಟಿ ಬ್ಯಾನರ್‌ನಡಿ ಈ ಸಿನಿಮಾ ನಿರ್ಮಾಣವಾಗಿದೆ. ಚಿತ್ರಕ್ಕೆ ವಾಸುಕಿ ವೈಭವ್ ಸಂಗೀತ ನಿರ್ದೇಶನ, ಅಜಯ್ ಸಂಕಲನ ಹಾಗೂ ಗುಣ ಕಲಾ ನಿರ್ದೇಶನವಿದೆ.

