ಬೆಂಗಳೂರು: ಸ್ಯಾಂಡಲ್‌ವುಡ್‌ನ ‘ಕೆಡಿ’ ಚಿತ್ರದ ‘ಸರ್ಸೆ ಸೆರಗ ಸರ್ಸೆ’ ಹಾಡಿನ ಸಾಹಿತ್ಯದ ಸುತ್ತ ಎದ್ದಿದ್ದ ವಿವಾದಕ್ಕೆ ನಿರ್ದೇಶಕ ಪ್ರೇಮ್ ಇದೀಗ ಬ್ರೇಕ್ ಹಾಕಿದ್ದಾರೆ. ಕಳೆದ ಎರಡು ದಿನಗಳಿಂದ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದ ಈ ಹಾಡಿನ ಬಗ್ಗೆ ಸ್ಪಷ್ಟನೆ ನೀಡಿರುವ ಜೋಗಿ ಪ್ರೇಮ್, ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಲ್ಲದೆ ಹಾಡನ್ನು ಮರು ರಚಿಸುವುದಾಗಿ ಘೋಷಿಸಿದ್ದಾರೆ.

ಕೆಡಿ ಚಿತ್ರದ ಐಟಂ ಸಾಂಗ್ ನಲ್ಲಿ ಬಳಸಲಾದ ಕೆಲವು ಪದಗಳು ಅಶ್ಲೀಲತೆಯಿಂದ ಕೂಡಿವೆ ಮತ್ತು ಮಹಿಳೆಯರನ್ನು ಕೀಳಾಗಿ ಚಿತ್ರಿಸುತ್ತಿವೆ ಎನ್ನುವ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿತ್ತು, ಈಗ ಈ ವಿವಾದದ ತೀವ್ರತೆಯನ್ನು ಅರಿತುಕೊಂಡು ಕ್ಷಮೆಯಾಚಿಸಿದ್ದಾರೆ, ಅಷ್ಟೇ ಅಲ್ಲದೆ ಚಿತ್ರದ ಸಾಹಿತ್ಯವನ್ನು ಮರು ರಚಿಸುವುದಾಗಿ ಹೇಳಿದ್ದಾರೆ.

ಈ ಕುರಿತಾಗಿ ತಮ್ಮ ಅಧಿಕೃತ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿರುವ ಪ್ರೇಮ್, ನಾನು ಇದುವರೆಗೆ ತಾಯಿ, ಪ್ರೀತಿ ಮತ್ತು ದೇವರ ಬಗ್ಗೆ ಅನೇಕ ಅದ್ಭುತ ಹಾಡುಗಳನ್ನು ಬರೆದಿದ್ದೇನೆ. ಈ ಹಾಡನ್ನು ಬರೆಯುವಾಗ ಒಂದು ಬಾಟಲಿ ಮತ್ತು ಉಪ್ಪಿನಕಾಯಿಯ ಕಂಟೆಂಟ್ ಇಟ್ಟುಕೊಂಡು ನನ್ನದೇ ದೃಷ್ಟಿಕೋನದಲ್ಲಿ ಬರೆದಿದ್ದೆ. ಆದರೆ ನನ್ನ ಉದ್ದೇಶ ಯಾರಿಗೂ ನೋವುಂಟು ಮಾಡುವ ಅಥವಾ ಅಶ್ಲೀಲವಾಗಿ ಬಿಂಬಿಸುವ ಉದ್ದೇಶವಾಗಿರಲಿಲ್ಲ,” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಒಂದು ವೇಳೆ ಈ ಸಾಹಿತ್ಯದಿಂದ ಕನ್ನಡಿಗರಿಗೆ ಮತ್ತು ಅಭಿಮಾನಿಗಳಿಗೆ ನೋವಾಗಿದ್ದರೆ ನಾನು ಕ್ಷಮೆಯಾಚಿಸುತ್ತೇನೆ, ಜನರ ಮನಸ್ಸು ನೋವಿಸ್ಸುವ ಉದ್ದೇಶ ನನಗಿಲ್ಲ ಎಂದು ಹೇಳಿದ್ದಾರೆ. ಇದೆ ವೇಳೆ ನೋರಾ ಫತೇಹಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಜೋಗಿ ಪ್ರೇಮ್ ‘ಯಾವುದೇ ಕಲಾವಿದರು ಸಾಹಿತ್ಯ ಮತ್ತು ಕಥೆ ಕೇಳದೆ ನಟಿಸಲು ಸಾಧ್ಯವಿಲ್ಲ. ಈಗ ಸೃಷ್ಟಿಯಾಗಿರುವ ವಿವಾದಕ್ಕೆ ಹೆದರಿ ಅವರು ಹಾಗೆ ಹೇಳಲು ಮುಂದಾಗಿರಬಹುದು, ಎಂದಿದ್ದಾರೆ.

ಈಗ ವಿವಾದಾತ್ಮಕ ಪದಗಳನ್ನು ತೆಗೆದುಹಾಕಿ ಹೊಸ ಸಾಹಿತ್ಯದ ಮೂಲಕ ಹಾಡನ್ನು ಬಿಡುಗಡೆ ಮಾಡುವುದಾಗಿ ಅವರು ಭರವಸೆ ನೀಡಿದ್ದಾರೆ. ಆ ಮೂಲಕ ಕೆಲವು ದಿನಗಳಿಂದ ಎದ್ದಿದ್ದ ವಿವಾದಕ್ಕೆ ಈಗ ಬ್ರೇಕ್ ಹಾಕಿದ್ದಾರೆ.

View this post on Instagram

A post shared by News Karnataka (@newskarnataka)