ಬೆಂಗಳೂರು: ಬಳ್ಳಾರಿ ಜೈಲಿನಲ್ಲಿರುವ ನಟ ದರ್ಶನ್ ಅಭಿನಯದ ಕರಿಯ ಸಿನಿಮಾ ಇಂದು ರಾಜ್ಯಾದ್ಯಂತ ರೀ ರಿಲೀಸ್ ಆಗಿದೆ. 20 ವರ್ಷಗಳ ಬಳಿಕ ಥಿಯೇಟರ್‌ಗಳಲ್ಲಿ ಮರು ಬಿಡುಗಡೆಯಾದ ಕರಿಯ ಚಿತ್ರವನ್ನು ದರ್ಶನ್ ಅಭಿಮಾನಿಗಳು ಸಂಭ್ರಮದಿಂದ ಸ್ವಾಗತಿಸಿದ್ದಾರೆ.

ಪ್ರಸನ್ನ ಚಿತ್ರಮಂದಿರದಲ್ಲಿ ಫ್ಯಾನ್ಸ್‌ ಕರಿಯ ಸಿನಿಮಾ ಪೋಸ್ಟರ್ ಜೊತೆಗೆ ವೈರಲ್ ಆದ ಜೈಲಿನ ಫೋಟೋಗೆ ಹಾಲಿನ ಅಭಿಷೇಕ ಮಾಡಿದರು. ಈ ವೇಳೆ ದರ್ಶನ್ ಅಭಿಮಾನಿಗಳಿಗೆ ಗಲಾಟೆ ಮಾಡದಂತೆ ಪೊಲೀಸರು ವಾರ್ನಿಂಗ್ ಕೊಟ್ಟರು. ಆದರೂ ದರ್ಶನ್ ಅಭಿಮಾನಿಯೊಬ್ಬ ಮಾಧ್ಯಮದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ದರ್ಶನ್ ಅಭಿಮಾನಿಯ ಗಲಾಟೆಗೆ ರೋಸಿ ಹೋದ ಪೊಲೀಸರು ಆತನನ್ನು ವಶಕ್ಕೆ ಪಡೆದರು.

ರೀ ರಿಲೀಸ್ ಆದ ಕರಿಯ ಸಿನಿಮಾ ನೋಡಲು ಬಂದ ಅಭಿಮಾನಿಗಳ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ ಘಟನೆ ಕೂಡ ನಡೆದಿದೆ. ಪ್ರಸನ್ನ ಥಿಯೇಟರ್‌ ಮುಂದೆ ಜಮಾಯಿಸಿದ ಅಭಿಮಾನಿಗಳನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ಮಾಡಿದರು.