ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡ ಸಿನಿಮಾ ಸೆಟ್ಟೇರಲು ಸಜ್ಜಾಗಿದ್ದು, ಡಾಲಿ ಧನಂಜಯ್ ನಾಡಪ್ರಭು ಕೆಂಪೇಗೌಡರ ಪಾತ್ರದಲ್ಲಿ ನಟಿಸಲಿದ್ದಾರೆ.
ಕೆಂಪೇಗೌಡರ ಕುರಿತಾಗಿ ಸಿನಿಮಾ ಮಾಡುವ ಪ್ರಯತ್ನ ಈ ಹಿಂದೆಯೂ ಆಗಿದ್ದು, ಆ ಸಿನಿಮಾದಲ್ಲಿ ದರ್ಶನ್, ಸುದೀಪ್ ಸೇರಿದಂತೆ ಹಲವು ಹೆಸರುಗಳು ಕೇಳಿ ಬಂದಿದ್ದವು. ಆದರೆ ಈಗ ಡಾಲಿ ಧನಂಜಯ್ ಕೆಂಪೇಗೌಡರ ಪಾತ್ರದಲ್ಲಿ ಮಿಂಚಲಿದ್ದಾರೆ. ಈಗಾಗಲೇ ಪೋಸ್ಟರ್ ಬಿಡುಗಡೆ ಆಗಿದ್ದು, ಗಿರಿಜಾ ಮೀಸೆ, ತಿಲಕ ಇಟ್ಟು, ಧನಂಜಯ್ ಖಡಕ್ ಆಗಿ ಕಾಣುತ್ತಿದ್ದಾರೆ.
ಈ ಸಿನಿಮಾವನ್ನು ಹಿರಿಯ, ಅನುಭವಿ ನಿರ್ದೇಶಕ ಟಿಎಸ್ ನಾಗಾಭರಣ ನಿರ್ದೇಶನ ಮಾಡಲಿದ್ದಾರೆ. ಸಿನಿಮಾ, ಸಾಹಿತ್ಯ ಎರಡರಲ್ಲೂ ಉತ್ತಮ ಕೃಷಿ ಹೊಂದಿರುವ ನಾಗಾಭರಣ ಕೆಂಪೇಗೌಡರ ಕತೆಯನ್ನು ಪರಿಣಾಮಕಾರಿಯಾಗಿ ತೆರೆಯ ಮೇಲೆ ತರುತ್ತಾರೆ ಎಂಬ ನಂಬಿಕೆ ಸಿನಿಮಾ ಪ್ರೇಮಿಗಳದ್ದು. ಸಿನಿಮಾಕ್ಕೆ ಎಂಎನ್ ಶಿವರುದ್ರಪ್ಪ, ಶುಭಂ ಗುಂಡಾಲ ನಿರ್ಮಾಣ ಮಾಡುತ್ತಿದ್ದಾರೆ.
ನಾಗಾಭರಣ ಅವರ ಪುತ್ರ ನಿರ್ದೇಶಕ ಪನ್ನಗಾಭರಣ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡಲಿದ್ದಾರೆ. ಸಂಗೀತವನ್ನು ವಾಸುಕಿ ವೈಭವ್ ನೀಡಲಿದ್ದಾರೆ. ಶಶಿಧರ ಅಡಪ ಅವರು ಸಿನಿಮಾದ ಸೆಟ್ ನಿರ್ಮಾಣ ಇನ್ನಿತರೆಗಳನ್ನು ನೋಡಿಕೊಳ್ಳಲಿದ್ದಾರೆ.

