ಬೆಂಗಳೂರು: “ಸಂಗೀತ ನಿರ್ದೇಶಕ ಹಂಸಲೇಖ ಇದ್ದರೆ ನಾವು ಸರಿಗಮಪ ರಿಯಾಲಿಟಿ ಶೋವನ್ನೇ ನೋಡಲ್ಲ” ಎಂದು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಒಂದು ಶುರುವಾಗಿದೆ. ಇದಕ್ಕೆ ಕಾರಣ ಹಂಸಲೇಖರ ಇತ್ತೀಚೆಗಿನ ಕೆಲವು ಹೇಳಿಕೆಗಳು.

ಹೌದು. . ಸಂಗೀತ ನಿರ್ದೇಶಕ ಹಂಸಲೇಖ ಇತ್ತೀಚೆಗೆ ಮೋದಿಯನ್ನು ಟೀಕಿಸುವ ಭರದಲ್ಲಿ ಮಲಯಾಳಿಗಳು ಬುದ್ಧಿವಂತರು, ಕನ್ನಡಿಗರು ಬುದ್ಧಿ ಬಳಸಲ್ಲ, ಭಾವನಾತ್ಮಕವಾಗಿ ಯೋಚಿಸುತ್ತಾರೆ ಎಂದಿದ್ದರು. ಅದಕ್ಕೆ ಮೊದಲು ಜೈನ ಮುನಿಗಳ, ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೀಡಾಗಿದ್ದರು.

ಇನ್ನು ʼದೇಶದ ಪ್ರತಿ ಬ್ರಾಹ್ಮಣನ ಮನೆಯಲ್ಲೂ ಭಗವದ್ಗೀತೆ ಜೊತೆಗೆ ಆರ್ಎಸ್ಎಸ್‌ನ ‘ಚಿಂತನ ಗಂಗಾ’ ಪುಸ್ತಕ ಇರುತ್ತೆ. 40 ವರ್ಷದ ಹಿಂದೆ ನಾನು ಚಿಂತನ ಗಂಗಾ ಪುಸ್ತಕ ಓದಿದ್ದೆ, ಅದು ಆರ್ ಎಸ್ ಎಸ್ ಅವರ ಸಂವಿಧಾನ. ಬ್ರಾಹ್ಮಣರು ಭಗವದ್ಗೀತೆಯನ್ನೂ ಓದುತ್ತಾರೆ, ಚಿಂತನಗಂಗಾವನ್ನೂ ಓದುತ್ತಾರೆ. ಆ ಪುಸ್ತಕ ಹೇಗೆ ಕೆಲಸ ಮಾಡುತ್ತೆ ಎಂದರೆ, ರಾಷ್ಟ್ರದಲ್ಲಿ ನಡೆಯುತ್ತಿರುವ ಸಂಗತಿಗಳಿಗೆ ವಿರುದ್ಧವಾದ ಪ್ರತಿದಾಳಿ ಹೇಗೆ ಮಾಡಬೇಕು ಅಂತ ಆ ಚಿಂತನಾ ಗಂಗಾ ಪುಸ್ತಕ ಓದಿ ಕಲಿಯುತ್ತಾರೆ. ಅಂದರೆ ಭಗವದ್ಗೀತೆ ಹಾಗೂ ಚಿಂತನಗಂಗಾ ಎರಡೂ ರಾಷ್ಟ್ರವಿರೋಧಿ ಹಾಗೂ ಸಂವಿಧಾನ ವಿರೋಧಿ. ಚಿಂತನಗಂಗಾ ಓದಿದವರು ರಾಷ್ಟ್ರದ ವಿರುದ್ಧ ಕೆಲಸ ಮಾಡುವ ಭಯೋತ್ಪಾದಕರಾಗುತ್ತಾರೆ ಎಂದು ಹಂಸಲೇಖ ಹೇಳಿದ್ದರು.

ಇತ್ತೀಚೆಗೆ ವಿವಾದಾತ್ಮಕ ಹೇಳಿಕೆಗಳಿಂದಲೇ ಸುದ್ದಿಯಾಗುತ್ತಿರುವ ಹಂಸಲೇಖ ಬಗ್ಗೆ ಒಂದು ವರ್ಗದ ಜನರಲ್ಲಿ ಭಾರೀ ಆಕ್ರೋಶವಿದೆ. ಈ ಕಾರಣಕ್ಕೆ ಜೀ ಕನ್ನಡದಲ್ಲಿ ಪ್ರಸಾರವಾಗಲಿರುವ ಸರಿಗಮಪ ಹಾಡಿನ ರಿಯಾಲಿಟಿ ಶೋ ತೀರ್ಪುಗಾರರಾಗಿ ಈ ಬಾರಿಯೂ ಹಂಸಲೇಖ ಇದ್ದರೆ ನಾವು ಶೋವನ್ನೇ ಬಹಿಷ್ಕರಿಸುವುದಾಗಿ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಟ್ರೆಂಡ್ ಸೃಷ್ಟಿಸಿದ್ದಾರೆ.