ಕನ್ನಡದ ಖ್ಯಾತ ಹಾಸ್ಯ ಕಲಾವಿದ ಚಿಕ್ಕಣ್ಣ ಅವರು ಇಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಸ್ಪೆಕ್ಟ್ರಮ್ ಹಾಲ್‌ನಲ್ಲಿ ನಡೆದ ವಿವಾಹ ಸಮಾರಂಭದಲ್ಲಿ ಚಿತ್ರರಂಗ ಹಾಗೂ ರಾಜಕೀಯ ಕ್ಷೇತ್ರದ ಗಣ್ಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು.

ನಟರಾದ ಡಾಲಿ ಧನಂಜಯ್, ಉಪೇಂದ್ರ, ಶ್ರೀಮುರಳಿ, ಅಭಿಷೇಕ್, ಅರುಣ್ ಸಾಗರ್, ರಂಗಾಯಣ ರಘು ಸೇರಿದಂತೆ ಹಲವು ಕಲಾವಿದರು ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಹಿರಿಯ ನಟಿಯರಾದ ತಾರಾ ಹಾಗೂ ಸುಧಾರಾಣಿ, ನಟಿ ಅದಿತಿ ಪ್ರಭುದೇವ ಸೇರಿದಂತೆ ಅನೇಕ ಗಣ್ಯರು ನವಜೋಡಿಗೆ ಶುಭಕೋರಿದ್ದಾರೆ

ಯಶ್ ಅಭಿನಯದ ‘ಕಿರಾತಕ’ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದ ಚಿಕ್ಕಣ್ಣ, ನಂತರ ಅನೇಕ ಯಶಸ್ವಿ ಚಿತ್ರಗಳಲ್ಲಿ ಅಭಿನಯಿಸಿ ಕನ್ನಡ ಚಿತ್ರರಂಗದ ಪ್ರಮುಖ ಹಾಸ್ಯ ನಟರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿದ್ದಾರೆ.

ಪಾವನಾ ಅವರು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಗ್ರಾಮದವರು. ಚಿಕ್ಕಣ್ಣ ಮತ್ತು ಪಾವನಾ ಅವರ ನಡುವೆ ಸುಮಾರು ಏಳು ವರ್ಷ ವಯಸ್ಸಿನ ಅಂತರವಿದೆ ಎನ್ನಲಾಗಿದೆ.

ವಿವಾಹ ಪೂರ್ವ ಕಾರ್ಯಕ್ರಮದಲ್ಲಿ ಚಿಕ್ಕಣ್ಣ ಹಾಗೂ ಪಾವನಾ ಅವರು ಸ್ಟೈಲಿಶ್ ಉಡುಗೆ ಧರಿಸಿ ಎಲ್ಲರ ಗಮನ ಸೆಳೆದಿದ್ದರು. ಪಾವನಾ ಅವರು ನೀಲಿ ಬಣ್ಣದ ಗೌನ್ ಧರಿಸಿದ್ದರು. ಚಿಕ್ಕಣ್ಣ ಕಪ್ಪು ಬಣ್ಣದ ಸೂಟ್‌ನಲ್ಲಿ ಮಿಂಚಿದ್ದರು.