ನಟ ಮೆಗಾ ಸ್ಟಾರ್ ಚಿರಂಜೀವಿ ಅವರಿಗೆ ಈ ವರ್ಷ ಅನೇಕ ಪುರಸ್ಕಾರಗಳು ಸಿಗುತ್ತಿವೆ. ಅವರು ‘ಪದ್ಮ ವಿಭೂಷಣ’ ಪ್ರಶಸ್ತಿ ಪಡೆದಿದ್ದು ಅಭಿಮಾನಿಗಳಿಗೆ ಹೆಮ್ಮೆಯ ವಿಷಯ. ಈಗ ಚಿರಂಜೀವಿ ಅವರು ಗಿನ್ನಿಸ್ ದಾಖಲೆ ಬರೆದಿದ್ದಾರೆ.
ಇಂದು (ಸೆಪ್ಟೆಂಬರ್ 22) ಅವರಿಗೆ ‘ಭಾರತೀಯ ಚಿತ್ರರಂಗದ ಮೋಸ್ಟ್ ಪ್ರೊಫೈಲಿಕ್ ಸ್ಟಾರ್’ ಎಂದು ಪ್ರಮಾಣಪತ್ರ ನೀಡಲಾಗಿದೆ. ಈ ಕಾರ್ಯಕ್ರಮದಲ್ಲಿ ಅನೇಕ ಸೆಲೆಬ್ರಿಟಿಗಳು ಭಾಗಿ ಆಗಿದ್ದರು. ಬಾಲಿವುಡ್ ನಟ ಆಮಿರ್ ಖಾನ್ ಕೂಡ ಹಾಜರಿದ್ದರು.
ಚಿರಂಜೀವಿ ಅವರು ಈವರೆಗೂ 156 ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಕಳೆದ 46 ವರ್ಷಗಳಿಂದ ಅವರು ಸಿನಿಮಾರಂಗದಲ್ಲಿ ಸಕ್ರಿಯರಾಗಿದ್ದಾರೆ. ಈವರೆಗಿನ ತಮ್ಮ ವೃತ್ತಿ ಜೀವನದಲ್ಲಿ ಚಿರಂಜೀವಿ ಅವರು 537 ಹಾಡುಗಳಲ್ಲಿ ಡ್ಯಾನ್ಸ್ ಮಾಡಿದ್ದಾರೆ. 24 ಸಾವಿರ ಡ್ಯಾನ್ಸ್ ಸ್ಟೆಪ್ಸ್ ಹಾಕಿದ್ದಾರೆ. ಈ ಸಾಧನೆಗಾಗಿ ಅವರ ಹೆಸರು ಗಿನ್ನಿಸ್ ವರ್ಲ್ಡ್ ರೆಕಾರ್ಡ್ನಲ್ಲಿ ಸೇರಿಕೊಂಡಿದೆ.
ಹೈದರಾಬಾದ್ನಲ್ಲಿ ಚಿರಂಜೀವಿ ಅವರಿಗೆ ಗಿನ್ನಿಸ್ ರೆಕಾರ್ಡ್ನ ಪ್ರಮಾಣಪತ್ರ ನೀಡಲಾಗಿದೆ. ಈ ಕಾರ್ಯಕ್ರಮಕ್ಕೆ ಅಶ್ವಿನಿ ದತ್ತ, ಬಿ. ಗೋಪಾಲ್, ಅಲ್ಲು ಅರವಿಂದ್, ಸುರೇಶ್ ಬಾಬು, ರಾಘವೇಂದ್ರ ರಾವ್, ಬಾಬಿ, ಗುಣಶೇಖರ್, ವಸಿಷ್ಠ, ಸುಷ್ಮಿತಾ, ವರುಣ್ ತೇಜ್, ವೈಷ್ಣವ್ ತೇಜ್ ಮುಂತಾದವರು ಆಗಮಿಸಿದ್ದರು. ಎಲ್ಲರ ಸಮ್ಮುಖದಲ್ಲಿ ಚಿರಂಜೀವಿ ಅವರು ಈ ಪ್ರಮಾಣಪತ್ರ ಪಡೆದಿದ್ದಾರೆ. ಅವರಿಗೆ ಎಲ್ಲರೂ ಅಭಿನಂದನೆ ಸಲ್ಲಿಸುತ್ತಿದ್ದಾರೆ.

