ನವದೆಹಲಿ: ಬಾಲಿವುಡ್‌ನ ಖ್ಯಾತ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರಿಗೆ ದೆಹಲಿ ಹೈಕೋರ್ಟ್ ಆಘಾತ ನೀಡಿದೆ. ಹಲವು ವರ್ಷಗಳಿಂದ ನಡೆಯುತ್ತಿದ್ದ ಚೆಕ್ ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣಾ ನ್ಯಾಯಾಲಯ ನೀಡಿದ್ದ ಶಿಕ್ಷೆಯನ್ನು ಹೈಕೋರ್ಟ್ ಎತ್ತಿಹಿಡಿದಿದ್ದು, ನಟನಿಗೆ 3 ತಿಂಗಳ ಜೈಲು ಶಿಕ್ಷೆಯ ಆದೇಶ ಹೊರಡಿಸಿದೆ.
ಇದರೊಂದಿಗೆ ಈ ಹಿಂದೆ ನೀಡಲಾಗಿದ್ದ ಜೈಲು ಶಿಕ್ಷೆಯ ಅಮಾನತು ಆದೇಶವನ್ನು ರದ್ದುಗೊಳಿಸಿರುವ ನ್ಯಾಯಾಲಯ, ನಟ ತಕ್ಷಣವೇ ಜೈಲು ಶಿಕ್ಷೆ ಅನುಭವಿಸಬೇಕು ಎಂದು ಸ್ಪಷ್ಟಪಡಿಸಿದೆ. ಇತ್ತೀಚೆಗೆ ಅಕ್ಷಯ್ ಕುಮಾರ್ ಅಭಿನಯದ ‘ಭೂತ್ ಬಂಗ್ಲಾ’ ಹಾಗೂ ‘ವೆಲ್ಕಮ್ ಟು ದಿ ಜಂಗಲ್’ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ರಾಜ್‌ಪಾಲ್ ಯಾದವ್ ಅವರಿಗೆ ಒಟ್ಟು 3 ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಒಂದು ವೇಳೆ ಕೋರ್ಟ್ ವಿಧಿಸಿರುವ ದಂಡದ ಮೊತ್ತವನ್ನು ಪಾವತಿಸಲು ಅವರು ವಿಫಲರಾದರೆ, ಈ ಜೈಲು ಶಿಕ್ಷೆಯ ಅವಧಿಯು 6 ತಿಂಗಳವರೆಗೆ ವಿಸ್ತರಣೆಯಾಗಲಿದೆ ಎಂದು ನ್ಯಾಯಾಲಯ ಎಚ್ಚರಿಸಿದೆ.
ನಟನ ವಿರುದ್ಧ ದಾಖಲಾಗಿದ್ದ ಒಟ್ಟು 7 ಪ್ರತ್ಯೇಕ ಪ್ರಕರಣಗಳಲ್ಲಿ ತಲಾ 1.05 ಕೋಟಿ ರೂಪಾಯಿಯಂತೆ ಒಟ್ಟಾರೆಯಾಗಿ 7.35 ಕೋಟಿ ರೂಪಾಯಿ ದಂಡವನ್ನು ವಿಧಿಸಿದೆ. ಈ ದಂಡದ ಪೈಕಿ ಪ್ರತಿ ಪ್ರಕರಣದ 1 ಕೋಟಿ 4 ಲಕ್ಷದ 75 ಸಾವಿರ ರೂಪಾಯಿಯನ್ನು ದೂರುದಾರರಿಗೆ ಪರಿಹಾರವಾಗಿ ನೀಡಬೇಕು ಹಾಗೂ ಇನ್ನುಳಿದ ತಲಾ 25,000 ರೂಪಾಯಿಯನ್ನು ಸರ್ಕಾರಕ್ಕೆ ಪಾವತಿಸಬೇಕು ಎಂದು ಕೋರ್ಟ್ ಕಟ್ಟುನಿಟ್ಟಿನ ನಿಯಮ ವಿಧಿಸಿದೆ. ನಟ ಈಗಾಗಲೇ ನ್ಯಾಯಾಲಯದಲ್ಲಿ ಜಮೆ ಮಾಡಿರುವ ಸುಮಾರು 2 ಕೋಟಿ ರೂಪಾಯಿಯನ್ನು ಈ ಒಟ್ಟು ಮೊತ್ತಕ್ಕೆ ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದೂ ಕೋರ್ಟ್ ತಿಳಿಸಿದೆ.
ರಾಜ್‌ಪಾಲ್ ಯಾದವ್ ಅವರ ಮೇಲಿರುವ ಈ ಕಾನೂನು ವಿವಾದವು 2012ರಲ್ಲಿ ಅವರು ಸ್ವತಃ ನಿರ್ದೇಶನ ಮಾಡಿದ್ದ ಅತಾ ಪತಾ ಲಾಪತಾ ಎಂಬ ಸಿನಿಮಾದಿಂದ ಆರಂಭವಾಗಿತ್ತು. ಈ ಚಿತ್ರದ ನಿರ್ಮಾಣಕ್ಕಾಗಿ ಅವರು ಮುರಳಿ ಪ್ರಾಜೆಕ್ಟ್ಸ್ ಸಂಸ್ಥೆಯಿಂದ ದೊಡ್ಡ ಮೊತ್ತದ ಸಾಲ ಪಡೆದುಕೊಂಡಿದ್ದರು. ಆದರೆ, ದುರದೃಷ್ಟವಶಾತ್ ಈ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಸೋಲನ್ನು ಅನುಭವಿಸಿತು. ಇದರ ಪರಿಣಾಮವಾಗಿ ನಟ ಸಾಲವನ್ನು ಮರುಪಾವತಿಸಲು ಸಾಧ್ಯವಾಗದೆ, ವರ್ಷದಿಂದ ವರ್ಷಕ್ಕೆ ಅದರ ಮೇಲಿನ ಬಡ್ಡಿಯು ಕೋಟ್ಯಂತರ ರೂಪಾಯಿಗೆ ಬಂದು ನಿಂತಿತ್ತು. ಸಾಲ ತೀರಿಸಲು ನೀಡಿದ್ದ ಚೆಕ್‌ಗಳು ಸರಣಿಯಾಗಿ ಬೌನ್ಸ್ ಆದ ಕಾರಣ ಈ ಕ್ರಿಮಿನಲ್ ಪ್ರಕರಣ ದಾಖಲಾಗಿತ್ತು.
ತಮ್ಮ ಸುದೀರ್ಘ ಕಾನೂನು ಹೋರಾಟ ಮತ್ತು ಆರ್ಥಿಕ ಸಂಕಷ್ಟದ ಬಗ್ಗೆ ತಿಹಾರ್ ಜೈಲು ಅಧಿಕಾರಿಗಳಿಗೆ ಶರಣಾಗುವ ಮುನ್ನ ರಾಜ್‌ಪಾಲ್ ಯಾದವ್ ಮಾತನಾಡಿದ್ದರು. ಸರ್, ನಾನೀಗ ಏನು ಮಾಡಲಿ? ನನ್ನ ಬಳಿ ಸದ್ಯಕ್ಕೆ ಹಣವಿಲ್ಲ. ಈ ಸಂಕಷ್ಟದಿಂದ ಹೊರಬರಲು ನನಗೆ ಯಾವುದೇ ದಾರಿ ಕಾಣಿಸುತ್ತಿಲ್ಲ. ಇಲ್ಲಿ ನಾನು ಒಂಟಿ, ಸಂಕಷ್ಟದ ಸಮಯದಲ್ಲಿ ಯಾರೂ ಸ್ನೇಹಿತರಿರುವುದಿಲ್ಲ. ಈ ಇಡೀ ಬಿಕ್ಕಟ್ಟನ್ನು ನಾನೊಬ್ಬನೇ ಎದುರಿಸಬೇಕಾಗಿದೆ ಎಂದು ಕಣ್ಣೀರಿಟ್ಟಿದ್ದರು. ಮೂಲಗಳ ಪ್ರಕಾರ, ನಟನ ಬಂಧನದ ಬೆನ್ನಲ್ಲೇ ಬಾಲಿವುಡ್ ನಟರಾದ ಸಲ್ಮಾನ್ ಖಾನ್, ಸೋನು ಸೂದ್ ಸೇರಿದಂತೆ ಹಲವರು ಅವರಿಗೆ ಆರ್ಥಿಕ ನೆರವು ನೀಡಲು ಮುಂದೆ ಬಂದಿದ್ದಾರೆ ಎನ್ನಲಾಗಿದೆ.
ಇದಕ್ಕೂ ಮುನ್ನ ತಿಹಾರ್ ಜೈಲಿನ ಒಳಗಿನ ತಮ್ಮ ದಿನಚರಿಯ ಅನುಭವದ ಬಗ್ಗೆ ಮಾತನಾಡಿದ್ದ ರಾಜ್‌ಪಾಲ್ ಯಾದವ್, ತಿಹಾರ್ ಜೈಲಿನ ಆಡಳಿತ ವ್ಯವಸ್ಥೆ ಅತ್ಯಂತ ಸುದೀರ್ಘ ಇತಿಹಾಸವನ್ನು ಹೊಂದಿದೆ. ಅಲ್ಲಿ ನೀಡಲಾಗುವ ಆಹಾರ ಚೆನ್ನಾಗಿದ್ದು, ಅದರ ಬಗ್ಗೆ ನನಗೇನು ದೂರಿಲ್ಲ. ಆದರೆ, ಜೈಲಿನಲ್ಲಿರುವ ಅನೇಕ ಕೈದಿಗಳು ಜೀವನದಲ್ಲಿ ಮತ್ತೊಂದು ಅವಕಾಶವನ್ನು ಪಡೆಯಲು ಅರ್ಹರಾಗಿದ್ದಾರೆ.
ತಿಳಿಯದೇ ಮಾಡಿದ ಒಂದು ತಪ್ಪನ್ನು ಕ್ಷಮಿಸಬಹುದು. ಹೀಗಾಗಿ ಅರ್ಹ ಕೈದಿಗಳ ಸುಧಾರಣೆಗೆ ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ವಿಶೇಷ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಾನು ಮನವಿ ಮಾಡುತ್ತೇನೆ. ಅದೇ ಸಮಯದಲ್ಲಿ ನಾನು ನಮ್ಮ ನ್ಯಾಯಾಂಗ ವ್ಯವಸ್ಥೆ ಮತ್ತು ಕೋರ್ಟ್ ತೀರ್ಪನ್ನು ಅತ್ಯಂತ ಗೌರವಿಸುತ್ತೇನೆ ಎಂದು ತಿಳಿಸಿದ್ದಾರೆ.

