ಬೆಂಗಳೂರು: ಕಿರುತೆರೆಯ ಜನಪ್ರಿಯ ಜೋಡಿ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಕೆಲ ತಿಂಗಳ ಹಿಂದೆ ದಾಂಪತ್ಯ ಜೀವನಕ್ಕೆ ಬ್ರೇಕ್‌ ಹಾಕಿ ವಿಚ್ಚೇದನ ಪಡೆದುಕೊಂಡಿದ್ದಾರೆ. ಆದರೆ ಇದೇ ಸಮಯ ಅವರಿಬ್ಬರು ಒಟ್ಟಾಗಿ ನಟಿಸುತ್ತಿದ್ದ ಕ್ಯಾಂಡಿಕ್ರಶ್‌ ಸಿನಿಮಾದ ಕತೆ ಏನು ಎಂಬ ಪ್ರಶ್ನೆ ಅಭಿಮಾನಿಗಳಲ್ಲಿ ಮೂಡಿತ್ತು.

ಅರ್ಧದಲ್ಲೇ ನಿಂತು ಹೋಗಿದ್ದ ಸಿನಿಮಾ ಇದೀಗ ಹೊಸ ಟೈಟಲ್‌ನೊಂದಿಗೆ ತೆರೆಯ ಮೇಲೆ ಬರಲು ಸಜ್ಜಾಗುತ್ತಿದೆ.

ಹೌದು, ಚಂದನ್‌ ಹಾಗೂ ನಿವೇದಿತಾ ನಟಿಸಿರುವ ಸಿನಿಮಾದ ತಾತ್ಕಾಲಿಕ ಟೈಟಲ್‌ ಕ್ಯಾಂಡಿಕ್ರಶ್‌ ಅನ್ನು ಬದಲಾಯಿಸಿ ಮುದ್ದುರಾಕ್ಷಸಿ ಎಂದು ಮಾಡಲಾಗಿದೆ. ವಿಚ್ಛೇದಿತ ಜೋಡಿ ಇಂದು ಚಿತ್ರದ ಟೈಟಲ್‌ ಅನ್ನು ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ಪುನೀತ್‌ ಶ್ರೀನಿವಾಸ್‌ ಅವರ ನಿರ್ದೇಶನದಲ್ಲಿ ಮೂಡಿಬಂದಿರುವ ಸೈಕೋ ಥ್ರಿಲ್ಲರ್‌ ಸಿನಿಮಾ ಇದಾಗಿದೆ. ಎಂಎಸ್‌ ತ್ಯಾಗರಾಜ್‌ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದರೆ, ಎ ಕರುಣಾಕರ್‌ ಛಾಯಾಗ್ರಾಹಕರಾಗಿ ಕಾರ್ಯನಿರ್ವಹಿಸಿದ್ದಾರೆ.