ಬಾಲಿವುಡ್ ನಟಿ ಕರಿಷ್ಮಾ ಕೆ. ತನ್ನಾ ಅವರು ತುಳು ಸಂಪ್ರದಾಯದಂತೆ ಸೀಮಂತ ಶಾಸ್ತ್ರ ಮಾಡಿಸಿಕೊಂಡಿದ್ದಾರೆ. ಕರಿಷ್ಮಾ ಮಂಗಳೂರು ಮೂಲದ ಉದ್ಯಮಿ ವರುಣ್ ಬಂಗೇರಾ ಅವರ ಜೊತೆ 2022 ರಲ್ಲಿ ಮುಂಬೈನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಕರಿಷ್ಮಾ ಪತಿ ವರುಣ್ ಬಂಗೇರಾ ಅವರ ತುಳವ ಸಂಪ್ರದಾಯಕ್ಕೆ ಮನಸೋತಿದ್ದಾರೆ. ಈ ಕುರಿತು ಪೋಸ್ಟ್ ಹಂಚಿಕೊಂಡಿರುವ ಅವರು, ‘ನಾವಿಬ್ಬರೂ ಜೊತೆಯಾಗಿ ದಕ್ಷಿಣ ಭಾರತದ ಶೈಲಿಯಲ್ಲಿ ಸೀಮಂತ ಶಾಸ್ತ್ರವನ್ನು ಆನಂದಿಸಿದ್ದೇವೆ. ಅವರ ಪ್ರೀತಿ, ಆಶೀರ್ವಾದ ಸದಾ ನೆನಪಿನಲ್ಲಿ ಇರುತ್ತದೆ’ ಎಂದು ಹೇಳಿಕೊಂಡಿದ್ದಾರೆ.

‘ತುಳುನಾಡಿನ ಈ ಸುಂದರ ಪೂಜೆ ವಿಧಿವಿಧಾನಗಳು, ಸಂಪ್ರದಾಯ, ಮಂತ್ರಗಳು, ಹೂವು ಹೀಗೆ ಪ್ರತಿಯೊಂದು ಸಣ್ಣ ಆಚರಣೆಯನ್ನು ಹತ್ತಿರದಿಂದ ನೋಡಿ ನಿಜಕ್ಕೂ ಅದ್ಭುತ ಎನಿಸಿತು. ಆ ಕ್ಷಣ ಕನಸಿನ ಲೋಕದಲ್ಲಿ ಇದ್ದೇವೆ ಅನಿಸಿತ್ತು’ ಎಂದು ಕೊಂಡಾಡಿದ್ದಾರೆ.