ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಮತ್ತೊಂದು ಹಾಡು ಬಿಡುಗಡೆಯಾಗಿದೆ. ಇಂದು (ಜುಲೈ 21) ಬೆಳಿಗ್ಗೆ 11.33ಕ್ಕೆ ಬಿಡುಗಡೆಯಾದ ‘ಮನಮೋಹಕ’ ಹಾಡಿನಲ್ಲಿ ಯಶ್ ಹಾಗೂ ತಾರಾ ಸುತಾರಿಯಾ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ.
ಇತ್ತೀಚೆಗೆ ಚಿತ್ರದ ಮೊದಲ ‘ತಬಾಹಿ’ ಹಾಡು ಬಿಡುಗಡೆಗೊಂಡಿತ್ತು. ಅದರಲ್ಲಿ ಯಶ್, ಕಿಯಾರಾ ಅಡ್ವಾಣಿ ಜೊತೆಗೆ ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. ಇದೀಗ ಬಿಡುಗಡೆಯಾದ ‘ಮನಮೋಹಕ’ ಹಾಡಿನಲ್ಲೂ ಯಶ್ ಅವರು ತಾರಾ ಸುತಾರಿಯಾ ರೋಮ್ಯಾಂಟಿಕ್ ಆಗಿ ಕಾಣಿಸಿಕೊಂಡು ಮತ್ತೆ ಅಚ್ಚರಿ ಮೂಡಿಸಿದ್ದಾರೆ.
ಮನಮೋಹಕ ಹಾಡನ್ನು ಜೀ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಹಾಡಿನಲ್ಲಿ ಕಿಯಾರಾ ಅಡ್ವಾಣಿ, ತಾರಾ ಸುತಾರಿಯಾ ಹಾಗೂ ನಯನತಾರಾ ಜೊತೆಗೆ ನಟ ಯಶ್ ಕಾಣಿಸಿಕೊಂಡಿದ್ದಾರೆ. ಹಾಡಿನಲ್ಲಿ ಒಟ್ಟಿಗೆ ಮೂವರು ನಟಿಯರ ಜೊತೆಗೆ ಯಶ್ ಇರುವುದು ಕಾಣಿಸಿದೆ. ಹೀಗಾಗಿ ಅಭಿಮಾನಿಗಳಲ್ಲಿ ಟಾಕ್ಸಿಕ್ ಸಿನಿಮಾದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿದೆ.
ಚಿತ್ರದಲ್ಲಿ ಯಶ್ ಅವರು ದ್ವಿಪಾತ್ರದಲ್ಲಿ ನಟಿಸಿದ್ದು, ಇವರ ಜೊತೆಗೆ ಕಿಯಾರಾ ಅಡ್ವಾಣಿ, ನಯನತಾರಾ, ಹುಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಅಭಿನಯಿಸಿದ್ದಾರೆ. ಕೆವಿಎನ್ ಪ್ರೊಡಕ್ಷನ್ಸ್ ಹಾಗೂ ಮಾನ್‌ಸ್ಟರ್ ಮೈಂಡ್ ಕ್ರಿಯೇಷನ್ಸ್ ಸಹಯೋಗದಲ್ಲಿ ಸಿನಿಮಾ ನಿರ್ಮಾಣವಾಗಿದೆ. ಗೀತು ಮೋಹನ್ದಾಸ್ ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಸಿನಿಮಾಕ್ಕೆ ರವಿ ಬಸ್ರೂರು ಸಂಗೀತ ನೀಡಿದ್ದಾರೆ. ರಾಷ್ಟ್ರಪ್ರಶಸ್ತಿ ವಿಜೇತ ರಾಜೀವ್ ರವಿ ಅವರು ಛಾಯಾಚಿತ್ರಗ್ರಹಣ ಮಾಡಿದ್ದಾರೆ.
ಈ ಸಿನಿಮಾ ಆಗಸ್ಟ್ 26ರಂದು ಬಿಡುಗಡೆಯಾಗುತ್ತಿದೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಚಿತ್ರೀಕರಿಸಲಾದ ಈ ಚಿತ್ರವು ಹಿಂದಿ, ತಮಿಳು, ತೆಲುಗು ಸೇರಿ ಹಲವು ಭಾಷೆಗಳಿಗೆ ಡಬ್ ಆಗಿದೆ.

