ಭಾರತದ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿ ಮತ್ತು ನೀತಾ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರ ವಿವಾಹ ಸಂಭ್ರಮಾಚರಣೆಯು ಸಾಮಾಜಿಕ ಮಾಧ್ಯಮದಲ್ಲಿ ಸುದ್ದಿ ಮಾಡುತ್ತಿವೆ.
ಈ ನಡುವೆ ಅಂಬಾನಿ ಕುಟುಂಬದ ನಿವಾಸ ಆಂಟಿಲಿಯಾದಲ್ಲಿ ಪ್ರತಿದಿನ 9,000 ಜನರಿಗೆ ಆಹಾರ ನೀಡಲಾಗುತ್ತಿದೆ. ಡಿಸೈನರ್ ಬಟ್ಟೆಗಳು, ಹೊಳೆಯುವ ಆಭರಣಗಳಿಂದ ಹಿಡಿದು ಅಂತಾರಾಷ್ಟ್ರೀಯ ತಾರೆಯರ ಆಗಮನದವರೆಗೆ ಶ್ರೀಮಂತ ಕುಟುಂಬದ ಮದುವೆಯ ಸಂಭ್ರಮವನ್ನು ನೋಡಿ ಜನ ಪುಳಕಿತರಾಗುತ್ತಿದ್ದಾರೆ.
ಇದೀಗ ಇದರ ನಡುವೆಯೇ ಅನಂತ್ ಅಂಬಾನಿಯವರು ಆಯೋಜಿಸಿರುವ ಭಂಡಾರ ಕಾರ್ಯಕ್ರಮದಲ್ಲಿ ಪ್ರತಿದಿನ 9,000 ಜನರಿಗೆ ಎರಡು ಹೊತ್ತು ಆಹಾರವನ್ನು ನೀಡಲಾಗುತ್ತಿದೆ.
ಮುಂಬಯಿನಲ್ಲಿರುವ ಅಂಬಾನಿ ಕುಟುಂಬದ ನಿವಾಸ ಆಂಟಿಲಿಯಾದಲ್ಲಿ ʼಭಂಡಾರʼ ನಡೆಯುತ್ತಿದೆ. ಇದು ಅನಂತ್ ಮತ್ತು ರಾಧಿಕಾ ಅವರ ವಿವಾಹದವರೆಗೆ 40 ದಿನಗಳವರೆಗೆ ಮುಂದುವರಿಯುತ್ತದೆ.
ಪ್ರತಿದಿನ ಸಾವಿರಾರು ಜನರಿಗೆ ಊಟ ನೀಡಲಾಗುತ್ತದೆ. ಇತ್ತೀಚೆಗೆ ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋ ಭಂಡಾರದ ಕೊನೆಯ ದಿನ ಜುಲೈ 15ಎಂದು ಬಹಿರಂಗಪಡಿಸಿದೆ. ಇದು ಜೂನ್ 5 ರಂದು ಪ್ರಾರಂಭವಾಯಿತು. ಈ ವಿಡಿಯೋದಲ್ಲಿ ಬಡಿಸಿದ ಆಹಾರದ ವಿವರಗಳನ್ನು ಹಂಚಿಕೊಳ್ಳಲಾಗಿದೆ.
ದಿನಕ್ಕೆ ಎರಡು ಬಾರಿ ಸಾರ್ವಜನಿಕರಿಗೆ ಇಲ್ಲಿ ಊಟವನ್ನು ವಿತರಿಸಲಾಗುತ್ತಿದೆ. ಒಂದು ಸಮಯದಲ್ಲಿ ಸುಮಾರು 3,000ರಿಂದ 4,000 ಜನರು ಊಟ ಮಾಡಬಹುದು. ಈ ಔತಣದಲ್ಲಿ ಭಾಗವಹಿಸುವ ಪ್ರತಿಯೊಬ್ಬರೂ ಅನಂತ್ ಅಂಬಾನಿ ಅವರ ಮುಂಬರುವ ವಿವಾಹಕ್ಕೆ ಆಶೀರ್ವಾದ ಮತ್ತು ಅಭಿನಂದನೆಗಳನ್ನು ನೀಡುತ್ತಿದ್ದಾರೆ ಎಂದು ಮೇಲ್ವಿಚಾರಕರು ಹೇಳಿದ್ದಾರೆ.

