ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ನೋವನ್ನು ಕಡಿಮೆ ಮಾಡಿಕೊಳ್ಳುವುದಕ್ಕಾಗಿ ಯೋಗ ಮತ್ತು ಹನುಮಾನ್ ಚಾಲೀಸ್ ಪಠಣಕ್ಕೆ ಮುಂದಾಗಿದ್ದು, ನಿತ್ಯವೂ ಈಗ ಜೈಲಿನಲ್ಲಿ ಕೂತು ದರ್ಶನ್ ಹನುಮಾನ್ ಚಾಲೀಸ್ ಪಠಣ ಮಾಡುತ್ತಿದ್ದಾರೆ. ಜೊತೆಗೆ ಜೈಲರ್ ಗೆ ಮನವಿ ಮಾಡಿ ಅಲ್ಲೇ ಸಿಗುವ ಪುಸ್ತಕಗಳನ್ನು ಓದುತ್ತಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ.
ಪರಪ್ಪನ ಅಗ್ರಹಾರ ಜೈಲಿಗೆ ದರ್ಶನ್ ಸೇರಿ ಮೂರು ವಾರಗಳು ಕಳೆದಿವೆ. ಒಂದೊಂದು ದಿನವನ್ನೂ ಅವರು ಕಳೆಯೋಕೆ ಕಷ್ಟ ಪಡ್ತಿದ್ದಾರೆ. ಆರೋಗ್ಯದಲ್ಲಿ ಆಗಾಗ್ಗೆ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ನಿತ್ಯವೂ ಅವರ ತೂಕ ಕಳೆದುಕೊಳ್ಳುತ್ತಿದ್ದಾರೆ. ಜೊತೆಗೆ ಜೈಲಿನ ಆಹಾರ ಕೂಡ ಅವರಿಗೆ ಒಗ್ಗುತ್ತಿಲ್ಲ. ಇದರಿಂದಾಗಿ ದರ್ಶನ್ ಕುಗ್ಗಿ ಹೋಗಿದ್ದಾರಂತೆ. ಖಿನ್ನತೆಯಿಂದಲೂ ಬಳಲುತ್ತಿದ್ದಾರಂತೆ.
ಆರೋಗ್ಯದ ಸಮಸ್ಯೆಯನ್ನು ಮುಂದಿಟ್ಟುಕೊಂಡು ಮೊನ್ನೆಯಷ್ಟೇ ತನಗೆ ಮನೆ ಊಟ ಬೇಕು ಅಂತ ಮಾನ್ಯ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದರು ದರ್ಶನ್. ಈ ಅರ್ಜಿಯ ವಿಚಾರಣೆಯನ್ನು ಜುಲೈ 18ಕ್ಕೆ ನ್ಯಾಯಾಲಯ ಮುಂದೂಡಿದೆ.

