News Karnataka Kannada
Thursday, May 09 2024
ಮನರಂಜನೆ

ಬಹುನಿರೀಕ್ಷಿತ ದೇಯಿ ಬೈದೆತಿ ಚಿತ್ರ 15ರಂದು ತೆರೆಗೆ

Photo Credit :

ಬಹುನಿರೀಕ್ಷಿತ ದೇಯಿ ಬೈದೆತಿ ಚಿತ್ರ 15ರಂದು ತೆರೆಗೆ

 ಮಂಗಳೂರು: 500 ವರ್ಷಗಳ ಹಿಂದಿನ ನೈಜ ಘಟನೆ ಆಧಾರಿತ ಸಾಮಾನ್ಯ ಮಹಿಳೆಯ ಅಸಾಮಾನ್ಯ ಕಥೆಯುಳ್ಳ ಬಹುನಿರೀಕ್ಷಿತ ‘ದೇಯಿ ಬೈದೆತಿ’ ಎಂಬ ತುಳು ಚಲನಚಿತ್ರ ಫೆ. 15 ರಂದು ಬಿಡುಗಡೆಯಾಗಲಿದೆ.

ಲಕ್ಷ್ಮಣ ಕೆ. ಅಮೀನ್ ಅರ್ಪಿಸುವ ಸಂಕ್ರಿ ಮೋಷನ್ ಪಿಕ್ಚರ್ ಬ್ಯಾನರ್‌ನಡಿ ಈ ಚಿತ್ರ ನಿರ್ಮಿಸಲಾಗಿದೆ. ತುಳುನಾಡಿನ ಜನಪದ, ಕರಾವಳಿಗರ ಜೀವನ ಶೈಲಿ, ಅಗೋಚರ ಸಂಪ್ರದಾಯಗಳ ಕಟ್ಟುಪಾಡು, ಪಾಡ್ಡನದ ಸತ್ಯಾಂಶವನ್ನು ಕಟ್ಟಿಕೊಡುವ ‘ದೇಯಿ ಬೈದೆತಿ’ ಸಿನಿಮಾವು ಹಿರಿಯ ಕಲಾವಿದ ಸೂರ್ಯೋದಯ ಪೆರಂಪಳ್ಳಿ ಅವರ ಚೊಚ್ಚಲ ನಿರ್ದೇಶನದ ಚಿತ್ರ. ದೇಯಿ ಬೈದೆತಿಯ ಹುಟ್ಟಿನಿಂದ ಅಂತ್ಯದವರೆಗಿನ ಕಥೆಯನ್ನು ಚಿತ್ರೀಕರಣ ಮಾಡಲಾಗಿದೆ. ಸೆನ್ಸಾರ್ ಮಂಡಳಿ ಇದಕ್ಕೆ ಯು ಪ್ರಮಾಣ ಪತ್ರ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದೆ.

2 ಗಂಟೆ 50 ನಿಮಿಷಗಳ ಕಾಲ ಪ್ರೇಕ್ಷಕರನ್ನು 500 ವರ್ಷಗಳ ಹಿಂದಕ್ಕೆ ಚಿತ್ರ ಕರೆದುಕೊಂಡು ಹೋಗುವಷ್ಟು ಕುತೂಹಲ ಅಡಗಿದೆ. ಕೋಟಿ ಚೆನ್ನಯರ ಪಾಡ್ಡನದಲ್ಲಿ ಈ ತನಕ ದೇಯಿ ಬೈದೆತಿ ಬದುಕಿನ ನುಡಿಯನ್ನು ಮಾತ್ರವೇ ಕೇಳಿದ್ದು, ಆ ನುಡಿಯೊಳಗೆ ಅಡಗಿರುವ ಸತ್ಯದ ನಡೆಯನ್ನು ಈ ಚಿತ್ರದಲ್ಲಿ ಅನಾವರಣಗೊಳಿಸಲಾಗಿದೆ. ಐದು ಶತಮಾನಗಳ ಹಿಂದಿನ ಕಾಲದ ಕರಾವಳಿಗರ ಜನಜೀವನ, ಆಚಾರ ವಿಚಾರ, ಉಡುಗೆ ತೊಡುಗೆಗಳನ್ನು, ಕಂಡು ಕೇಳರಿಯದ ಚಿತ್ರವಿಚಿತ್ರ ಸಂಪ್ರದಾಯಗಳನ್ನು, ಕಟ್ಟುಪಾಡುಗಳನ್ನು ಚಿತ್ರದಲ್ಲಿ ಬಿಂಬಿಸಲಾಗಿದೆ. ಆ ಕಾಲಕ್ಕೆ ಸರಿಹೊಂದುವಂತಹ ಭವ್ಯ ಮನೆಗಳ ಸೆಟ್‌ಗಳನ್ನು ಪರ್ಕಳದ ಶೆಟ್ಟಿಬೆಟ್ಟು, ಶೀರೂರು ಮೂಲ ಮಠದಲ್ಲಿ ರಚಿಸಿ ಚಿತ್ರೀಕರಣ ನಡೆಸಲಾಗಿದೆ. ಉಳಿದೆಲ್ಲಾ ದೃಶ್ಯಗಳನ್ನು ಕರಾವಳಿಯಲ್ಲೇ ಚಿತ್ರಕರಿಸಲಾಗಿದ್ದು ಸುಮಾರು ಒಂದೂವರೆ ಕೋಟಿ ಖರ್ಚು ತಗುಲಿದೆ.

ಸಂಕ್ರಿ ಮೋಷ್‌ನ್ ಪಿಕ್ಚರ್ ಬ್ಯಾನರ್‌ನಡಿ ನಿರ್ಮಿಸಲಾಗಿರುವ ಚಿತ್ರಕ್ಕೆ ದೇವರಾಜ್ ಪಾಲನ್, ರಾಜ್‌ಕೃಷ್ಣ, ಅಮಿತ್‌ ರಾವ್‌ ಅವರು ಸಹ ನಿರ್ದೇಶನ ನೀಡಿದ್ದಾರೆ. ಬಿ. ಭಾಸ್ಕರರಾವ್ ಸಂಗೀತ, ಮಣಿಕಾಂತ್ ಕದ್ರಿ ಅವರ ಹಿನ್ನೆಲೆ ಸಂಗೀತವಿದೆ. ಕರಾವಳಿಯ ಸಂಸ್ಕೃತಿಯನ್ನು ಬಲ್ಲವರಾದ ರವಿ ಪೂಜಾರಿ ಹಿರಿಯಡ್ಕ ಹಾಗೂ ದಿನೇಶ್ ಸುವರ್ಣ ರಾಯಿ ಕಲಾ ನಿರ್ದೇಶಕರಾಗಿದ್ದಾರೆ. ಉಮೇಶ್ ಪೂಜಾರಿ ಬೆಳ್ತಂಗಡಿ ಸಹ ನಿರ್ಮಾಪಕರಾಗಿದ್ದಾರೆ. ಸಂಜೀವ ಪೂಜಾರಿ ಹೆರ್ಗ, ಕಿರಣ್ ಹೆಗ್ಡೆ ಬಿಜ್ರಿ ಅವರ ನಿರ್ಮಾಣ ನಿರ್ವಹಣೆ ಇದೆ. ಕಲಾವತಿ ದಯಾನಂದ್, ಸೂರ್ಯೋದಯ್ ಪೆರಂಪಳ್ಳಿ, ಲಹರೀ ಕೋಟ್ಯಾನ್, ಸುರೇಶ್‌ ಸಾಲ್ಯಾನ್, ಕಾಲೇಶ್ ಅವರ ಹಿನ್ನೆಲೆ ಗಾಯನವಿದೆ. ರವಿ ಸುವರ್ಣ ಮತ್ತು ಹರೀಶ್‌ ಪೂಜಾರಿ ಕುಕ್ಕಂಜೆ ಅವರ ಛಾಯಾಗ್ರಹಣ, ಮೋಹನ್‌ ಎಲ್‌ . ಸಂಕಲನದ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಸೀತಾ ಕೋಟೆ, ಚೇತನ್‌ ರೈ ಮಾಣಿ, ಸೌಜನ್ಯ ಹೆಗ್ಡೆ, ಅಮಿತ್‌ ರಾವ್‌, ಸೂರ್ಯೋದಯ್ ಪೆರಂಪಳ್ಳಿ ಮೊದಲಾದವರು ಅಭಿನಯಿಸಿದ್ದಾರೆ.

ಮಂಗಳೂರು, ಉಡುಪಿ, ಮಣಿಪಾಲದ ಮಲ್ಪಿಫ್ಲೆಕ್ಸ್ ಮತ್ತು ಉಡುಪಿಯ ಕಲ್ಪನಾ, ಮಂಗಳೂರಿನ ಜ್ಯೋತಿ, ಬೆಳ್ತಂಗಡಿಯ ಭಾರತ್‌, ಕಾರ್ಕಳದ ಪ್ಲಾನೆಟ್‌, ಸುರತ್ಕಲ್ ನ ನಟರಾಜ್‌, ಮೂಡಬಿದಿರೆ ಅಮರಶ್ರೀ ಸೇರಿದಂತೆ ಹಲವು ಚಿತ್ರಮಂದಿರದಲ್ಲಿ ಚಿತ್ರವು ತೆರೆಕಾಣಲಿದೆ. ದುಬೈ, ಬೆಹೆರೆನ್, ಕತಾರ್, ಕುವೈತ್, ಮುಂಬೈ, ಬೆಂಗಳೂರು, ಗುಜರಾತ್, ಪೂನೆ ಸೇರಿದಂತೆ ಇನ್ನೂ ಹಲವಾರು ಕಡೆ ಚಿತ್ರ ತೆರೆ ಕಾಣಲು ತಯಾರಿ ನಡೆಯುತ್ತಿದೆ ಎಂದು ನಿರ್ದೇಶಕ ಸೂರ್ಯೋದಯ ಪೆರಂಪಳ್ಳಿ ತಿಳಿಸಿದ್ದಾರೆ.

 

 

 

 

ನ್ಯೂಸ್‌ಕನ್ನಡ.ಕಾಂ ಇದರ ಗುಣಮಟ್ಟದ, ಸ್ವತಂತ್ರ ಪತ್ರಿಕೋದ್ಯಮವನ್ನು ನಿಮ್ಮ ದೇಣಿಗೆಯ ಮೂಲಕ ಪ್ರೋತ್ಸಾಹಿಸಿ.

How useful was this post?

Click on a star to rate it!

Average rating 0 / 5. Vote count: 0

No votes so far! Be the first to rate this post.

This site is protected by reCAPTCHA and the Google Privacy Policy and Terms of Service apply.
149

ವಾಟ್ಸಪ್ ನಲ್ಲಿ ತಾಜಾ ಸುದ್ದಿಗಳನ್ನು ಪಡೆಯಲು ದಯವಿಟ್ಟು