ಬೆಂಗಳೂರು: ಚಿತ್ರ ನಿರ್ದೇಶಕಿ, ನಿರ್ಮಾಪಕಿ ಕವಿತಾ ಲಂಕೇಶ್ ಅವರು ಫೈರ್ ಸಂಸ್ಥೆಯ ನೂತನ ಅಧ್ಯಕ್ಷೆಯಾಗಿ ನೇಮಕವಾಗಿದ್ದಾರೆ. ಈ ಹಿಂದೆ ಸಂಸ್ಥೆಯ ಅಧ್ಯಕ್ಷೆಯಾಗಿದ್ದ ನಟಿ ಪ್ರಿಯಾಂಕ ಉಪೇಂದ್ರ ಅವರು ಗುರುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದರು.
ಫೈರ್ ಸಂಸ್ಥೆಯು ಈಚೆಗೆ ಅರ್ಜುನ್ ಸರ್ಜಾ ಮೇಲೆ ಮೀ ಟೂ ಆರೋಪ ಮಾಡಿದ್ದ ನಟಿ ಶ್ರುತಿ ಹರಿಹರನ್ ಪರ ಬೆಂಬಲವನ್ನು ನೀಡಿತ್ತು. ಈ ಸಂಸ್ಥೆಯು ಕಳೆದ 2 ವರ್ಷಗಳ ಹಿಂದೆ ಆ ದಿನಗಳು ಚಿತ್ರದ ನಾಯಕ ಚೇತನ್ ಹಾಗೂ ಪ್ರಿಯಾಂಕ ಉಪೇಂದ್ರ ಅವರ ಮುಂದಾಳತ್ವದಲ್ಲಿ ಕನ್ನಡ ಚಿತ್ರರಂಗದಲ್ಲಿ ಆಗುವ ಲಿಂಗತಾರತಮ್ಯ ಸಂಬಂಧಪಟ್ಟ ದೂರಗಳನ್ನು ವಿಚಾರಿಸುವುದಕ್ಕೆ ಸ್ಥಾಪನೆಯಾಗಿತ್ತು. ‘ಆದರೆ ಈಚೆಗೆ ಫೈರ್ ಸಂಸ್ಥೆಯ ಉದ್ದೇಶ ಬದಲಾದ ಹಿನ್ನೆಲೆ ನನಗೆ ಈ ಸಂಸ್ಥೆಯಲ್ಲಿ ಮುಂದುವರೆಯಲು ಇಷ್ಟಗಿರಲಿಲ್ಲ.
ಈ ನಿಟ್ಟಿನಲ್ಲಿ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ ಎಂದು ಪ್ರಿಯಾಂಕ ಉಪೇಂದ್ರ ಹೇಳಿಕೆ ನೀಡಿದ್ದರು. ಇದೀಗ ಫೈರ್ ಸಂಸ್ಥೆಯ ಅಧ್ಯಕ್ಷೆಯಾಗಿ ಕವಿತಾ ಲಂಕೇಶ್ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಇವರು ಕನ್ನಡದ ಖ್ಯಾತ ಬರಹಗಾರ, ಪತ್ರಕರ್ತ ಪಿ.ಲಂಕೇಶ್ ಅವರ ಪುತ್ರಿ.