ಬೆಂಗಳೂರು, ಮೇ. 8: ಜನಪ್ರಿಯ ನಟಿ, ಡಬ್ಬಿಂಗ್ ಕಲಾವಿದೆ ಸುನೇತ್ರಾ ಪಂಡಿತ್ ಚಲಿಸುತ್ತಿದ್ದ ದ್ವಿಚಕ್ರ ವಾಹನ ಅಪಘಾಕ್ಕೀಡಾಗಿದೆ. ಶೂಟಿಂಗ್ ಮುಗಿಸಿ ಮನೆಗೆ ತೆರಳುತ್ತಿದ್ದ ನಟಿ ಬೈಕ್ಗೆ ಅಪಘಾತವಾಗಿದ್ದು, ನಟಿ ತಲೆಗೆ ಪೆಟ್ಟು ಬಿದ್ದಿದೆ. ಆದರೆ, ತಲೆಗೆ ಹೆಲ್ಮೆಟ್ ಹಾಕಿದ್ದರಿಂದ ಆಪಾಯದಿಂದ ಪಾರಾಗಿದ್ದಾರೆ.
ಬಸವನಗುಡಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ 12: 30ರ ಸುಮಾರಿಗೆ ಈ ಘಟನೆ ನಡೆದಿದ್ದು, ರಸ್ತೆ ಹಂಪ್ ದಾಟುವಾಗ ಬೈಕ್ನಿಂದ ಆಯತಪ್ಪಿ ಬಿದ್ದು ಸುನೇತ್ರಾ ಗಾಯಗೊಂಡಿದ್ದಾರೆ.
ಎನ್ ಆರ್ ಕಾಲೋನಿಯ 9ನೇ ಮುಖ್ಯ ರಸ್ತೆಯಲ್ಲಿ ಹಾಸ್ಯ ನಟಿ ಸುನೇತ್ರಾ (40) ತಮ್ಮ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ರಸ್ತೆ ಮೂಲೆಯಲ್ಲಿ ಹಂಪ್ ಎದುರಾಗಿದೆ. ಹಂಪ್ ಹಾರಿಸಿದ ಬಳಿಕ ನಿಯಂತ್ರಣ ತಪ್ಪಿ ರಸ್ತೆ ಪಕ್ಕಕ್ಕೆ ಸುನೇತ್ರಾ ಬಿದ್ದಿದ್ದಾರೆ ಎಂದು ತಿಳಿದು ಬಂದಿದೆ.
ಸುನೇತ್ರಾರನ್ನು ತಕ್ಷಣವೇ ರಕ್ಷಿಸಿದ ಸ್ಥಳೀಯರು ಸಮೀಪದ ಬಿಎಂಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ಅವೈಜ್ಞಾನಿಕ ಹಂಪ್ ಕಾಣದೆ ಬೈಕ್ ಜಂಪ್ ಆಗಿದ್ದರಿಂದ ಈ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ನರಸಿಂಹರಾಜ ಕಾಲೋನಿಯ 9ನೇ ಮುಖ್ಯರಸ್ತೆಯಲ್ಲಿರುವ ಹಂಪ್ ಹಾರಿಸಿ, ಆಯತಪ್ಪಿ ಬಿದ್ದ ನಟಿ ಸುನೇತ್ರಾ ತಲೆ ಪೆಟ್ಟಾದರೂ ಬಚಾವಾಗಿದ್ದಾರೆ. ಹೆಲ್ಮೆಟ್ ಹಾಕಿದ್ದ ಪರಿಣಾಮ ತಲೆಗೆ ಸ್ವಲ್ಪ ಪೆಟ್ಟಾಗಿದ್ದು, ಸಣ್ಣ ಪುಟ್ಟ ಗಾಯಗಳಾಗಿವೆ. ನಟಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಆಘಾತದಿಂದ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಅವೈಜ್ಞಾನಿಕ ಹಂಪ್, ಮಣ್ಣು ಮುಚ್ಚಿದ ರಸ್ತೆಗುಂಡಿನಿಂದ ವಾಹನ ನಿಯಂತ್ರಣ ತಪ್ಪಿರುವ ಸಾಧ್ಯತೆಯಿದೆ. ಬೆಂಗಳೂರಿನಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ, ರಸ್ತೆ ದುರಸ್ತಿ ಕಾಮಗಾರಿಯೂ ಕುಂಠಿತವಾಗಿದ್ದು, ರಸ್ತೆ ಗುಂಡಿ ಮುಚ್ಚುವ ಕಾರ್ಯ ನಡೆದಿದ್ದರೂ, ಹಂಪ್ ಬಗ್ಗೆ ಬಿಬಿಎಂಪಿ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.