ಚೆನ್ನೈ ; ತಮಿಳು ಚಿತ್ರ ನಟ ಧನುಷ್ 2015ರಲ್ಲಿ ರೋಲ್ಸ್ ರಾಯ್ಸ್ ಕಾರನ್ನು ವಿದೇಶದಿಂದ ಆಮದು ಮಾಡಿಕೊಂಡಿದ್ದರು. ಇದಕ್ಕೆ ಅವರು 60 ಲಕ್ಷ ರೂಪಾಯಿ ಎಂಟ್ರಿ ಟ್ಯಾಕ್ಸ್ ಪಾವತಿ ಮಾಡಬೇಕಿತ್ತು. ಧನುಷ್ ಅರ್ಧದಷ್ಟು ತೆರಿಗೆ ಪಾವತಿಸಿ ಉಳಿದಿದ್ದಕ್ಕೆ ವಿನಾಯಿತಿ ನೀಡುವಂತೆ ಕೋರಿದ್ದರು. ಈ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ನ ನ್ಯಾಯಮೂರ್ತಿ ಎಸ್.ಎಂ. ಸುಬ್ರಮಣಿಯಮ್ ಅವರು ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ತೆರಿಗೆ ವಿನಾಯಿತಿ ನೀಡೋಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಇಂದು ಧನುಷ್ ಸಲ್ಲಿಕೆ ಮಾಡಿದ ಅರ್ಜಿ ವಿಚಾರಣೆಗೆ ಬಂದಿದೆ. ಈ ವೇಳೆ ಕೋರ್ಟ್ಗೆ ಧನುಷ್ ಪರ ವಕೀಲರು ಮನವಿ ಒಂದನ್ನು ಮಾಡಿಕೊಂಡರು. ‘ಧನುಷ್ ಶೇ.50 ತೆರಿಗೆಯನ್ನು ತುಂಬಿದ್ದಾರೆ. ಉಳಿದ ತೆರಿಗೆಯನ್ನು ಪಾವತಿಸೋಕೆ ಅವರು ಇಚ್ಛಿಸಿದ್ದಾರೆ. ಹೀಗಾಗಿ, ಅರ್ಜಿ ಹಿಂಪಡೆಯೋಕೆ ಅವಕಾಶ ನೀಡಬೇಕು’ ಎಂದು ವಕೀಲರು ಕೋರಿದರು. ಆದರೆ, ಕೋರ್ಟ್ ಇದನ್ನು ನಿರಾಕರಿಸಿದೆ. ಅಲ್ಲದೆ, ಅರ್ಜಿ ವಿಚಾರಣೆ ನಡೆಸಿ ತೀರ್ಪನ್ನು ಕೂಡ ನೀಡಿದೆ.
‘ತೆರಿಗೆದಾರರ ಹಣವನ್ನು ಬಳಸಿಕೊಂಡು ನೀವು ರಸ್ತೆಗಳಲ್ಲಿ ಐಷಾರಾಮಿ ಕಾರನ್ನು ಓಡಿಸುತ್ತೀರಿ. ಹಾಲು ಮಾರಾಟಗಾರ ಮತ್ತು ದಿನಗೂಲಿ ಕಾರ್ಮಿಕರು ಕೂಡ ತಾವು ಖರೀದಿಸುವ ಪ್ರತಿ ಲೀಟರ್ ಪೆಟ್ರೋಲ್ಗೆ ತೆರಿಗೆ ಪಾವತಿಸುತ್ತಿದ್ದಾರೆ. ಈ ವ್ಯಕ್ತಿಗಳು ತೆರಿಗೆ ವಿನಾಯಿತಿ ಕೋರಿ ಹೈಕೋರ್ಟ್ ಅನ್ನು ಸಂಪರ್ಕಿಸಿಲ್ಲ’ ಎಂದು ಹೇಳುವ ಮೂಲಕ ನ್ಯಾಯಮೂರ್ತಿ ಎಸ್.ಎಂ. ಸುಬ್ರಮಣಿಯಮ್ ಅವರು ಧನುಷ್ಗೆ ಛೀಮಾರಿ ಹಾಕಿದರು. ಧನುಷ್ ಪರ ವಕೀಲರು ಆಗಸ್ಟ್ 9ರ ಒಳಗೆ ಬಾಕಿ ಇರುವ ತೆರಿಗೆ ಪಾವತಿ ಮಾಡುವುದಾಗಿ ಕೋರ್ಟ್ಗೆ ಭರವಸೆ ನೀಡಿದ್ದಾರೆ.