ಮಂಗಳೂರು: ಟಾಟಾ ಟ್ರಸ್ಟ್ಸ್ ಬೆಂಬಲಿತ ಝುಲೇಖಾ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ (ZYIO) ಆಯೋಜಿಸಿದ್ದ ‘Recon-Rehab 2026’ ಅಂತಾರಾಷ್ಟ್ರೀಯ ವಿಚಾರ ಸಂಕಿರಣ ಮತ್ತು ಪ್ರಾಯೋಗಿಕ ಕಾರ್ಯಾಗಾರ ಯಶಸ್ವಿಯಾಗಿ ನಡೆಯಿತು.

ಬ್ರಿಟನ್ನ ಯೂನಿವರ್ಸಿಟಿ ಹಾಸ್ಪಿಟಲ್ಸ್ ಬರ್ಮಿಂಗ್ಹ್ಯಾಮ್ ಎನ್ಎಚ್ಎಸ್ ಫೌಂಡೇಶನ್ ಟ್ರಸ್ಟ್ ಸಹಯೋಗದಲ್ಲಿ ನಡೆದ ಈ ಎರಡು ದಿನಗಳ ಕಾರ್ಯಕ್ರಮ ಅಕ್ಟೋಬರ್ 30 ಮತ್ತು 31ರಂದು ಯೆನೆಪೋಯ ವೈದ್ಯಕೀಯ ಕಾಲೇಜು ಹಾಗೂ ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನಲ್ಲಿ ನಡೆಯಿತು.

ಕ್ಯಾನ್ಸರ್ ಚಿಕಿತ್ಸೆ ಮತ್ತು ಅಪಘಾತದ ಗಾಯಗಳ ನಂತರ ರೋಗಿಗಳಿಗೆ ಸಮಗ್ರ ಪುನರ್ವಸತಿ ಒದಗಿಸುವ ಉದ್ದೇಶದಿಂದ ಈ ಸಂಕಿರಣ ಆಯೋಜಿಸಲಾಗಿತ್ತು. ತಲೆ ಮತ್ತು ಕುತ್ತಿಗೆ ಕ್ಯಾನ್ಸರ್, ಪುನರ್ನಿರ್ಮಾಣ ಶಸ್ತ್ರಚಿಕಿತ್ಸೆ ಹಾಗೂ ಮುಖ-ದವಡೆ ಕೃತಕ ಅಂಗ ಜೋಡಣೆ ಕ್ಷೇತ್ರದ ದೇಶ-ವಿದೇಶಗಳ ಖ್ಯಾತ ತಜ್ಞರು ಇದರಲ್ಲಿ ಪಾಲ್ಗೊಂಡಿದ್ದರು.

ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಇಎಂಡಿ ಕಟ್ಟಡದ ಸಭಾಂಗಣದಲ್ಲಿ ನಡೆದ ಸಮಾರಂಭವನ್ನು ಯೆನೆಪೋಯ (ಪರಿಗಣಿತ ವಿಶ್ವವಿದ್ಯಾಲಯ)ದ ಮಾಜಿ ಸಹ ಕುಲಪತಿ ಡಾ. ಬಿ.ಎಚ್. ಶ್ರೀಪತಿ ರಾವ್ ಉದ್ಘಾಟಿಸಿದರು. ಉಪ ಕುಲಪತಿ ಡಾ. ಕೆ.ಎಸ್. ಗಂಗಾಧರ ಸೋಮಯಾಜಿ ಅಧ್ಯಕ್ಷತೆ ವಹಿಸಿದ್ದರು.

ಸಂಘಟನಾ ಸಮಿತಿ ಅಧ್ಯಕ್ಷ, ಯೆನೆಪೋಯ ಸಹ ಕುಲಾಧಿಪತಿ ಹಾಗೂ ಝುಲೇಖಾ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ನಿರ್ದೇಶಕ ಮತ್ತು ಸಿಇಒ ಆದ ಡಾ. ಎಂ. ವಿಜಯಕುಮಾರ್ ಮಾತನಾಡಿ, ಕ್ಯಾನ್ಸರ್ ಚಿಕಿತ್ಸೆ ಮತ್ತು ಪುನರ್ವಸತಿಯನ್ನು ಮುನ್ನಡೆಸಲು ವಿವಿಧ ವೈದ್ಯಕೀಯ ವಿಭಾಗಗಳು ಒಟ್ಟಾಗಿ ಕೆಲಸ ಮಾಡುವುದು ಅಗತ್ಯ ಎಂದರು. ಯೆನೆಪೋಯ ವೈದ್ಯಕೀಯ ಕಾಲೇಜಿನ ಡೀನ್ ಡಾ. ಪ್ರಕಾಶ್ ರಾಬರ್ಟ್ ಎಂ. ಸಲ್ಡಾನ್ಹಾ ಹಾಗೂ ಯೆನೆಪೋಯ ದಂತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಲಕ್ಷ್ಮೀಕಾಂತ್ ಛಾತ್ರ ಗೌರವ ಅತಿಥಿಗಳಾಗಿ ಭಾಗವಹಿಸಿದ್ದರು.

ಮೃತದೇಹಗಳ ಮೇಲೆ ನಡೆದ ಸುಧಾರಿತ ಶಸ್ತ್ರಚಿಕಿತ್ಸಾ ಮಾಸ್ಟರ್ಕ್ಲಾಸ್ ಸಂಕಿರಣದ ಪ್ರಮುಖ ಆಕರ್ಷಣೆಯಾಗಿತ್ತು. ಸೂಕ್ಷ್ಮ ರಕ್ತನಾಳಗಳನ್ನು ಜೋಡಿಸುವ ‘ಫ್ರೀ-ಫ್ಲ್ಯಾಪ್’ ಶಸ್ತ್ರಚಿಕಿತ್ಸಾ ತಂತ್ರಗಳನ್ನು ಬ್ರಿಟನ್ನ ಡಾ. ಸತ್ ಪರ್ಮಾರ್ ಮತ್ತು ಡಾ. ಪ್ರವ್ ಪ್ರವೀಣ್ ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು. ಜಾಗತಿಕ ಖ್ಯಾತಿಯ ಪುನರ್ನಿರ್ಮಾಣ ಶಸ್ತ್ರಚಿಕಿತ್ಸಕ ಡಾ. ಸುಬ್ರಹ್ಮಣ್ಯ ಅಯ್ಯರ್ ಅವರು ತಮ್ಮ ತಂತ್ರಗಳನ್ನು ಪ್ರದರ್ಶಿಸಿ, ಇಂತಹ ರೋಗಿಗಳು ಮತ್ತೆ ಸಮಾಜದಲ್ಲಿ ಸಹಜ ಜೀವನ ನಡೆಸಲು ಹೇಗೆ ನೆರವಾಗಬಹುದು ಎಂಬುದನ್ನು ವಿವರಿಸಿದರು.

ಬರ್ಮಿಂಗ್ಹ್ಯಾಮ್ನ ಕ್ವೀನ್ ಎಲಿಜಬೆತ್ ಆಸ್ಪತ್ರೆಯ ತಜ್ಞರಾದ ಸ್ಟೀಫನ್ ಎಡ್ಮಂಡ್ಸನ್ ಮತ್ತು ಕೆಲ್ಲಿ ಹುಡ್ ನೇತೃತ್ವದಲ್ಲಿ ಕೃತಕ ಅಂಗ ಜೋಡಣೆ ಕಾರ್ಯಾಗಾರ ನಡೆಯಿತು. ಪ್ರತಿಯೊಬ್ಬ ರೋಗಿಗೆ ತಕ್ಕಂತೆ ಸಿಲಿಕೋನ್ ಕೃತಕ ಕಿವಿ ತಯಾರಿಸುವ ವಿಧಾನದ ಬಗ್ಗೆ ಇಲ್ಲಿ ತರಬೇತಿ ನೀಡಲಾಯಿತು. ಆಧುನಿಕ ಪುನರ್ನಿರ್ಮಾಣ ಚಿಕಿತ್ಸಾ ವಿಧಾನಗಳ ಬಗ್ಗೆ ಭಾಗವಹಿಸಿದವರಿಗೆ ಉಪಯುಕ್ತ ಪ್ರಾಯೋಗಿಕ ಅನುಭವ ದೊರೆಯಿತು.
ಹುಟ್ಟಿನಿಂದಲೇ ಕಿವಿ ಇಲ್ಲದ ಬಾಲಕನೊಬ್ಬನಿಗೆ ವಿಶೇಷವಾಗಿ ತಯಾರಿಸಿದ ಸಿಲಿಕೋನ್ ಕಿವಿಯನ್ನು ಅಳವಡಿಸಿದ್ದು ಕಾರ್ಯಕ್ರಮದ ಸ್ಮರಣೀಯ ಕ್ಷಣವಾಗಿತ್ತು. ಮುಖದ ಸಹಜ ರೂಪ, ಆತ್ಮವಿಶ್ವಾಸ ಹಾಗೂ ಜೀವನದ ಗುಣಮಟ್ಟವನ್ನು ಮರಳಿ ತರುವಲ್ಲಿ ಕೃತಕ ಅಂಗ ಜೋಡಣೆ ಎಷ್ಟು ಮಹತ್ವದ್ದು ಎಂಬುದನ್ನು ಇದು ತೋರಿಸಿಕೊಟ್ಟಿತು.

ಅಂತಾರಾಷ್ಟ್ರೀಯ ಶೈಕ್ಷಣಿಕ ಸಹಯೋಗವನ್ನು ಬಲಪಡಿಸುವಲ್ಲಿ ಮತ್ತು ಈ ಭಾಗದಲ್ಲಿ ಶಸ್ತ್ರಚಿಕಿತ್ಸೆ ಹಾಗೂ ಕೃತಕ ಅಂಗ ಜೋಡಣೆಯನ್ನು ಒಳಗೊಂಡ ಸಮಗ್ರ ಪುನರ್ವಸತಿ ಸೇವೆಗಳನ್ನು ವಿಸ್ತರಿಸುವಲ್ಲಿ ‘ರೀಕಾನ್-ರಿಹ್ಯಾಬ್ 2026’ ಮಹತ್ವದ ಹೆಜ್ಜೆಯಾಗಿದೆ. ಜಾಗತಿಕ ಪರಿಣತಿ, ನವೀನ ತಂತ್ರಗಳು ಹಾಗೂ ರೋಗಿಕೇಂದ್ರಿತ ಕಾಳಜಿಯ ಚಿಕಿತ್ಸೆಯನ್ನು ಕರಾವಳಿ ಕರ್ನಾಟಕಕ್ಕೆ ತರುವ ಯೆನೆಪೋಯ ವಿಶ್ವವಿದ್ಯಾಲಯದ ಬದ್ಧತೆಯನ್ನು ಈ ಸಂಕಿರಣ ಮತ್ತೊಮ್ಮೆ ಸಾಬೀತುಪಡಿಸಿತು.

ಸಂಘಟನಾ ಕಾರ್ಯದರ್ಶಿಗಳಾದ ಡಾ. ರೋಹನ್ ಥಾಮಸ್, ಡಾ. ಪ್ರವ್ ಪ್ರವೀಣ್ ಮತ್ತು ಡಾ. ಕಾರ್ಕಳ ಸಯ್ಯದ್ ಸುಹೈಮ್ ಕಾರ್ಯಕ್ರಮವನ್ನು ಸಂಯೋಜಿಸಿದರು. ಯೆನೆಪೋಯ ಮತ್ತು ಝುಲೇಖಾ ಯೆನೆಪೋಯ ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಸಂಘಟನಾ ತಂಡಗಳು ಸಕ್ರಿಯವಾಗಿ ಸಹಕರಿಸಿದವು.