ಮಂಗಳೂರು: ಉನ್ನತ ಶಿಕ್ಷಣವನ್ನು ಉದ್ಯಮ ಕ್ಷೇತ್ರದ ಅಗತ್ಯಗಳಿಗೆ ಅನುಗುಣವಾಗಿ ರೂಪಿಸುವ ನಿಟ್ಟಿನಲ್ಲಿ ಮಂಗಳೂರಿನ ಯೆನೆಪೋಯಾ (ಡೀಮ್ಡ್ ಟು ಬಿ ಯೂನಿವರ್ಸಿಟಿ) ಅಧೀನದ ಯೆನೆಪೋಯಾ ಇನ್ಸ್ಟಿಟ್ಯೂಟ್ ಆಫ್ ಆರ್ಟ್ಸ್, ಸೈನ್ಸ್, ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ ಸಂಸ್ಥೆಯು ಟ್ಯಾಲಿ ಎಜುಕೇಷನ್ ಸಂಸ್ಥೆಯೊಂದಿಗೆ ಶೈಕ್ಷಣಿಕ ಸಹಭಾಗಿತ್ವಕ್ಕೆ ಒಪ್ಪಂದ ಮಾಡಿಕೊಂಡಿದೆ.
ಈ ಸಹಭಾಗಿತ್ವದ ಮೂಲಕ ಸಂಸ್ಥೆಯ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವಿದ್ಯಾರ್ಥಿಗಳಿಗೆ ಟ್ಯಾಲಿ ಎಜುಕೇಷನ್ನ ವೃತ್ತಿಪರ ಪ್ರಮಾಣಪತ್ರ ಕೋರ್ಸ್ಗಳನ್ನು ನಿಯಮಿತ ಪಠ್ಯಕ್ರಮದ ಭಾಗವಾಗಿ ಕಲಿಯುವ ಅವಕಾಶ ದೊರೆಯಲಿದೆ. ಇದರಿಂದ ವಿದ್ಯಾರ್ಥಿಗಳು ಪದವಿ ಶಿಕ್ಷಣದ ಜೊತೆಗೆ ಉದ್ಯೋಗ ಕ್ಷೇತ್ರಕ್ಕೆ ಅಗತ್ಯವಾದ ಪ್ರಾಯೋಗಿಕ ಕೌಶಲಗಳನ್ನು ಬೆಳೆಸಿಕೊಳ್ಳಲು ಸಾಧ್ಯವಾಗಲಿದೆ.
ಗಣಕೀಕೃತ ಲೆಕ್ಕಪತ್ರ ನಿರ್ವಹಣೆ, ಹಣಕಾಸು ನಿರ್ವಹಣೆ, ತೆರಿಗೆ ವ್ಯವಸ್ಥೆ, ಜಿಎಸ್ಟಿ ಹಾಗೂ ಡಿಜಿಟಲ್ ವ್ಯವಹಾರ ನಿರ್ವಹಣೆಗೆ ಸಂಬಂಧಿಸಿದ ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಒದಗಿಸುವುದು ಈ ಒಪ್ಪಂದದ ಮುಖ್ಯ ಉದ್ದೇಶವಾಗಿದೆ. ಟ್ಯಾಲಿ ಎಜುಕೇಷನ್ ವತಿಯಿಂದ ಬೇಸಿಕ್ಸ್ ಆಫ್ ಟ್ಯಾಲಿ, ಟ್ಯಾಲಿ ಫಂಡಮೆಂಟಲ್ಸ್, ಫೈನಾನ್ಷಿಯಲ್ ಅಕೌಂಟಿಂಗ್ ಯೂಸಿಂಗ್ ಟ್ಯಾಲಿಪ್ರೈಮ್, ಫೈನಾನ್ಷಿಯಲ್ ಅಕೌಂಟಿಂಗ್ ವಿತ್ ಜಿಎಸ್ಟಿ ಮತ್ತು ಆಫೀಸ್ ಆಟೊಮೇಷನ್ ಸೇರಿದಂತೆ ವಿವಿಧ ಪ್ರಮಾಣಪತ್ರ ಕೋರ್ಸ್ಗಳನ್ನು ಪರಿಚಯಿಸಲಾಗುತ್ತದೆ.
ಇದರೊಂದಿಗೆ ಟ್ಯಾಲಿ ಎಸೆನ್ಷಿಯಲ್ ಲೆವೆಲ್ 1, 2 ಮತ್ತು 3 ಹಾಗೂ ಟ್ಯಾಲಿ ಎಸೆನ್ಷಿಯಲ್ ಕಾಂಪ್ರಿಹೆನ್ಸಿವ್ ಕೋರ್ಸ್ಗಳನ್ನೂ ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ಇಂಟರ್ನ್ಶಿಪ್ ಸಂಯೋಜಿತ ಪ್ರಮಾಣಪತ್ರ ಕೋರ್ಸ್ಗಳು, ಪ್ರತ್ಯೇಕ ಇಂಟರ್ನ್ಶಿಪ್ ಕಾರ್ಯಕ್ರಮಗಳು ಹಾಗೂ ಮರುಮೌಲ್ಯಮಾಪನದ ಅವಕಾಶಗಳೂ ಈ ಸಹಭಾಗಿತ್ವದ ಭಾಗವಾಗಿವೆ. ಈ ಮೂಲಕ ವಿದ್ಯಾರ್ಥಿಗಳು ಮೂಲಭೂತ ಲೆಕ್ಕಪತ್ರ ಜ್ಞಾನದಿಂದ ಹಿಡಿದು ವೃತ್ತಿಪರ ಮಟ್ಟದ ಪ್ರಾಯೋಗಿಕ ತರಬೇತಿಯವರೆಗೆ ಹಂತ ಹಂತವಾಗಿ ಪರಿಣತಿ ಗಳಿಸಲು ಅವಕಾಶ ಕಲ್ಪಿಸಲಾಗಿದೆ.
ಪ್ರಸ್ತುತ ಉದ್ಯೋಗ ಮಾರುಕಟ್ಟೆಯಲ್ಲಿ ಲೆಕ್ಕಪತ್ರ ನಿರ್ವಹಣಾ ತಂತ್ರಾಂಶ, ಹಣಕಾಸು ದಾಖಲೆಗಳ ನಿರ್ವಹಣೆ, ತೆರಿಗೆ ಪ್ರಕ್ರಿಯೆಗಳು ಹಾಗೂ ಡಿಜಿಟಲ್ ವ್ಯವಹಾರ ಕೌಶಲಗಳಿಗೆ ಹೆಚ್ಚಿನ ಬೇಡಿಕೆಯಿದೆ. ಈ ಹಿನ್ನೆಲೆಯಲ್ಲಿ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ವಿದ್ಯಾರ್ಥಿಗಳಿಗೆ ಇಂತಹ ಪ್ರಮಾಣಪತ್ರ ಕೋರ್ಸ್ಗಳು ಉದ್ಯೋಗಾವಕಾಶಗಳನ್ನು ಹೆಚ್ಚಿಸುವುದರ ಜೊತೆಗೆ ತರಗತಿಯಲ್ಲಿನ ಸೈದ್ಧಾಂತಿಕ ಜ್ಞಾನವನ್ನು ಕಾರ್ಯಕ್ಷೇತ್ರದ ಪ್ರಾಯೋಗಿಕ ಅನುಭವದೊಂದಿಗೆ ಬೆಸೆಯಲು ನೆರವಾಗಲಿವೆ.
ಸಹಭಾಗಿತ್ವದ ಒಪ್ಪಂದದ ಅಧಿಕೃತ ಪ್ರಕ್ರಿಯೆಯಲ್ಲಿ ಟ್ಯಾಲಿ ಎಜುಕೇಷನ್ನ ದಕ್ಷಿಣ ವಲಯದ ಸಹಾಯಕ ಪ್ರಧಾನ ವ್ಯವಸ್ಥಾಪಕ (ವ್ಯವಹಾರ ಅಭಿವೃದ್ಧಿ) ಜಿಜಿ ಕುಮಾರ್ ಎನ್. ಮತ್ತು ಕರ್ನಾಟಕ ಪ್ರಾದೇಶಿಕ ವ್ಯವಸ್ಥಾಪಕ ಪ್ರೇಮರಾಜ್ ಉಪಸ್ಥಿತರಿದ್ದರು. ಯೆನೆಪೋಯ ಪದವಿ ಕಾಲೇಜಿನ ಪ್ರಾಂಶುಪಾಲರು ಹಾಗೂ ವಾಣಿಜ್ಯ ಮತ್ತು ನಿರ್ವಹಣಾ ವಿಭಾಗದ ಡೀನ್ ಡಾ. ಜೀವನ್ ರಾಜ್, ಉಪಪ್ರಾಂಶುಪಾಲ ಡಾ. ರತ್ನಾಕರ ಶೆಟ್ಟಿ ಪಿ., ನಿರ್ವಹಣಾ ವಿಭಾಗದ ಮುಖ್ಯಸ್ಥೆ ಡಾ. ನೀಕ್ಷಿತಾ ವಿ. ಶೆಟ್ಟಿ, ವಾಣಿಜ್ಯ ವಿಭಾಗದ ಮುಖ್ಯಸ್ಥ ಮೊಹಮ್ಮದ್ ಶಾಹಿದ್, ಯೆನ್ ಕೆರಿಯರ್ ಕನೆಕ್ಟ್ನ ಸಂಯೋಜಕ ಶ್ರೀನಿವಾಸ ಪೆಜತ್ತಾಯ ಹಾಗೂ ಟ್ಯಾಲಿ ಎಜುಕೇಷನ್ ಸಂಯೋಜಕಿ ಉಳ್ಳಾಲ್ ಲತಿಕಾ ನಾರಾಯಣ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಡಾ. ಜೀವನ್ ರಾಜ್, ಉನ್ನತ ಶಿಕ್ಷಣದೊಂದಿಗೆ ಉದ್ಯಮ ಕ್ಷೇತ್ರದ ಪ್ರಾಯೋಗಿಕ ಜ್ಞಾನವನ್ನು ವಿದ್ಯಾರ್ಥಿಗಳಿಗೆ ಒದಗಿಸುವುದು ಇಂದಿನ ಅಗತ್ಯವಾಗಿದೆ. ಇಂತಹ ಶೈಕ್ಷಣಿಕ ಸಹಭಾಗಿತ್ವಗಳು ವಿದ್ಯಾರ್ಥಿಗಳಲ್ಲಿ ವೃತ್ತಿಪರ ಸಾಮರ್ಥ್ಯ, ಪ್ರಾಯೋಗಿಕ ಕೌಶಲ ಮತ್ತು ಉದ್ಯೋಗ ಕ್ಷೇತ್ರದ ನಿರೀಕ್ಷೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುವ ಆತ್ಮವಿಶ್ವಾಸವನ್ನು ಬೆಳೆಸಲು ಸಹಕಾರಿಯಾಗುತ್ತವೆ ಎಂದು ತಿಳಿಸಿದರು. ವಿದ್ಯಾರ್ಥಿಗಳಿಗೆ ಹೆಚ್ಚುವರಿ ಕಲಿಕಾ ಅವಕಾಶಗಳನ್ನು ಒದಗಿಸಲು ಸಹಕರಿಸಿದ ಟ್ಯಾಲಿ ಎಜುಕೇಷನ್ ಸಂಸ್ಥೆಗೆ ಅವರು ಕೃತಜ್ಞತೆ ಸಲ್ಲಿಸಿದರು.
ಈ ಸಹಭಾಗಿತ್ವದ ಮೂಲಕ ವಿದ್ಯಾರ್ಥಿಗಳಿಗೆ ಪದವಿಯ ಜೊತೆಗೆ ಉದ್ಯೋಗಕ್ಕೆ ಪೂರಕವಾದ ವೃತ್ತಿಪರ ಅರ್ಹತೆ ಮತ್ತು ಕೌಶಲಗಳನ್ನು ಒದಗಿಸುವ ಮೂಲಕ ಶಿಕ್ಷಣವನ್ನು ಉದ್ಯೋಗಮುಖಿಯಾಗಿಸುವ ಮತ್ತೊಂದು ಮಹತ್ವದ ಹೆಜ್ಜೆಯನ್ನು ಯೆನೆಪೋಯ ಪದವಿ ಕಾಲೇಜು ಇರಿಸಿದೆ.

