ಮಂಗಳೂರು: ಸೆಂಟರ್ ಫಾರ್ ಎಥಿಕ್ಸ್ ಮತ್ತು ಫೋರೆನ್ಸಿಕ್ ಅಂಥರೊಪೊಲೊಜಿ ಯೂನಿಟ್, ಡಿಪಾರ್ಟ್ಮೆಂಟ್ ಆಫ್ ಫೋರೆನ್ಸಿಕ್ ಮೆಡಿಸಿನ್ ಅಂಡ್ ಟಾಕ್ಸಿಕಾಳೋಜಿ, ಯೆನೆಪೊಯ ವಿಶ್ವವಿದ್ಯಾಲಯದ ಆಗಸ್ಟ್ 29, 2026 ರಂದು ವಿಶ್ವ ಮಾನವೀಯ ದಿನಾಚರಣೆ 2026 ರ ಭಾಗವಾಗಿ “ವಿಪತ್ತುಗಳ ಸಮಯದಲ್ಲಿ ಮಾನವೀಯ ಕ್ರಮ ಮತ್ತು ಮೃತ ದೇಹಗಳನ್ನು ಒಳಗೊಂಡ ಸಂಶೋಧನಾ ಚೌಕಟ್ಟು” ಎಂಬ ಹೈಬ್ರಿಡ್ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆಯೋಜಿಸುತ್ತಿದೆ.
ಈ ಹೈಬ್ರಿಡ್ ವಿಚಾರ ಸಂಕಿರಣವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ವಿದ್ವಾಂಸರು, ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ವೃತ್ತಿಪರರು ಹಾಗೂ ತಜ್ಞರನ್ನು ಒಂದೇ ವೇದಿಕೆಗೆ ಕರೆತಂದು, ಮಾನವೀಯ ಪ್ರತಿಕ್ರಿಯೆಯ ಅತ್ಯಂತ ಮಹತ್ವದ ಮತ್ತು ಅನೇಕ ಬಾರಿ ಕಡೆಗಣಿಸಲ್ಪಡುವ ಆಯಾಮವೊಂದನ್ನು ಕುರಿತು ಚರ್ಚಿಸಲು ಅವಕಾಶ ಕಲ್ಪಿಸುತ್ತದೆ: ವಿಪತ್ತಿನ ಸಂದರ್ಭದಲ್ಲಿ ಬಾಧಿತ ಜನರ ಆರೈಕೆ, ಮಾನವೀಯ ನೆರವು, ಕಾರ್ಯಕರ್ತರ ಸುರಕ್ಷತೆ ಹಾಗೂ ಮೃತರನ್ನು ಘನತೆ ಮತ್ತು ಗೌರವದಿಂದ ನಿರ್ವಹಿಸುವುದು ಅತ್ಯಂತ ಮಹತ್ವದ ಅಂಶಗಳಾಗಿವೆ.
ನಮ್ಮ ವಿಚಾರ ಸಂಕಿರಣದ ಆಶಯವು ನಮಗೆ ನೆನಪಿಸುವಂತೆ — “ಕಾಳಜಿಯ ಸಮಯ ಮುಗಿದಿದೆ; ಪರಿಣಾಮಕಾರಿ ಕ್ರಮ ಕೈಗೊಳ್ಳುವ ಸಮಯ ಈಗ ಬಂದಿದೆ” — ಇದು ಈ ವರ್ಷದ ವಿಶ್ವ ಆರೋಗ್ಯ ಸಂಸ್ಥೆಯ (WHO) ಧ್ಯೇಯವಾಕ್ಯವಾಗಿದೆ. ನಾವು ಕೇವಲ ಜಾಗೃತಿ ಮೂಡಿಸುವುದನ್ನು ಮೀರಿ ಕ್ರಿಯಾತ್ಮಕ ಕ್ರಮಗಳತ್ತ ಸಾಗುತ್ತಾ, ಬಾಧಿತ ಕುಟುಂಬಗಳ ಗೌರವವನ್ನು ಕಾಪಾಡುವ, ಮಾನವೀಯ ನೆರವು ಕಾರ್ಯಕರ್ತರನ್ನು ಗೌರವಿಸುವ ಹಾಗೂ ಮರಣಾನಂತರವೂ ಮಾನವ ಘನತೆಯನ್ನು ಎತ್ತಿಹಿಡಿಯುವ ನೈತಿಕ ಚೌಕಟ್ಟುಗಳು ಮತ್ತು ಸಾಕ್ಷ್ಯಾಧಾರಿತ ಕಾರ್ಯವಿಧಾನಗಳನ್ನು ರೂಪಿಸುವತ್ತ ಗಮನಹರಿಸುತ್ತೇವೆ. ಸಂಘರ್ಷಗಳು ಮತ್ತು ವಿಪತ್ತುಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ, ನಮ್ಮ ಮಾನವೀಯ ನೆರವು ವ್ಯವಸ್ಥೆಗಳು ಹಾಗೂ ಇಡೀ ಮಾನವಕುಲವು ಕರುಣೆ ಮತ್ತು ಪರಿಣಾಮಕಾರಿ ಕಾರ್ಯಪದ್ಧತಿಯೊಂದಿಗೆ ಪ್ರತಿಕ್ರಿಯಿಸುವ ಅಗತ್ಯವಿದೆ.
ಈ ವಿಚಾರ ಸಂಕಿರಣವು ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ತಜ್ಞರಿಂದ ಇತ್ತೀಚಿನ ವಿಪತ್ತುಗಳಿಂದ ಕಲಿತ ಪಾಠಗಳನ್ನು ಅರಿತುಕೊಳ್ಳಲು, ಕ್ಷೇತ್ರದಲ್ಲಿ ಪಡೆದ ಅನುಭವಗಳನ್ನು ಹಂಚಿಕೊಳ್ಳಲು ಹಾಗೂ ಮೃತರನ್ನು ಗೌರವಯುತವಾಗಿ ನಿರ್ವಹಿಸಲು ಮಾರ್ಗದರ್ಶನ ನೀಡುವ ಸಂಶೋಧನಾ ಚೌಕಟ್ಟುಗಳನ್ನು ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲು ಭಾಗವಹಿಸುವವರಿಗೆ ಒಂದು ಮಹತ್ವದ ವೇದಿಕೆಯನ್ನು ಒದಗಿಸುತ್ತದೆ.
ಒಟ್ಟಾಗಿ, ವಿಪತ್ತು ಮತ್ತು ಬಿಕ್ಕಟ್ಟಿನ ಸಂದರ್ಭದಲ್ಲಿ ನೀಡುವ ಪ್ರತಿಕ್ರಿಯೆಯನ್ನು ಇನ್ನಷ್ಟು ಮಾನವೀಯ ಮತ್ತು ನೈತಿಕ ಕಾರ್ಯಪದ್ಧತೆಯಾಗಿ ಪರಿವರ್ತಿಸಲು ನಾವು ಬದ್ಧರಾಗುತ್ತೇವೆ. ಈ ವಿಚಾರ ಸಂಕಿರಣದ ಸಂದರ್ಭದಲ್ಲಿ, ಭಾರತೀಯ ಸನ್ನಿವೇಶದಲ್ಲಿ ಮೃತದೇಹಗಳನ್ನು ಒಳಗೊಂಡ ಸಂಶೋಧನೆಯಲ್ಲಿ ಮಾನವೀಯ ನೈತಿಕತೆಯ ಸಾಮರ್ಥ್ಯ ವೃದ್ಧಿ ಕುರಿತ ಯೋಜನೆಯ ಸಂಶೋಧನಾ ಫಲಿತಾಂಶಗಳನ್ನು ಹಂಚಿಕೊಳ್ಳಲಾಗುತ್ತದೆ. ಈ ಯೋಜನೆಗೆ ಅಮೆರಿಕನ್ ಅಕಾಡೆಮಿ ಆಫ್ ಫೊರೆನ್ಸಿಕ್ ಸೈನ್ಸ್ (AAFS) – ಮಾನವೀಯ ಮತ್ತು ಮಾನವ ಹಕ್ಕುಗಳ ಸಂಪನ್ಮೂಲ ಕೇಂದ್ರ (HHRRC) ಅನುದಾನದ ಬೆಂಬಲವಿದೆ.
ಮೃತರನ್ನು ಒಳಗೊಂಡ ನೈತಿಕ ಸಮಸ್ಯೆಗಳಿಗೆ ಸಂಬಂಧಿಸಿದ ಅಡೆತಡೆಗಳು, ಸವಾಲುಗಳು ಹಾಗೂ ಅವುಗಳನ್ನು ಪರಿಹರಿಸುವ ಮಾರ್ಗೋಪಾಯಗಳನ್ನು ಈ ವಿಚಾರ ಸಂಕಿರಣವು ಪ್ರಸ್ತುತಪಡಿಸಲಿದೆ. ಜೊತೆಗೆ, ಮೃತರ ಗೌರವ ಮತ್ತು ಘನತೆಯನ್ನು ಕಾಪಾಡುವ ನಿಟ್ಟಿನಲ್ಲಿ ಕೈಗೊಳ್ಳಬಹುದಾದ ಕ್ರಮಗಳ ಬಗ್ಗೆಯೂ ಚರ್ಚಿಸಲಾಗುತ್ತದೆ.

