ಮಂಗಳೂರು: ಶಕ್ತಿನಗರದ ಸಾನಿಧ್ಯ ಭಿನ್ನ ಸಾಮರ್ಥ್ಯ ಮಕ್ಕಳ ವಸತಿಯುತ ಶಾಲೆಯಲ್ಲಿ ವಿಶ್ವ ಡೌನ್ ಸಿಂಡ್ರೋಮ್ ದಿನಾಚರಣೆ ಕಾರ್ಯಕ್ರಮ ನಡೆಯಿತು. ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದರು.
ಸಾನಿಧ್ಯ ಸಂಸ್ಥೆಯ ಆಡಳಿತಾಧಿಕಾರಿ ಡಾ. ವಸತ ಕುಮಾರ್ ಶೆಟ್ಟಿ, ಶ್ರೀ ಗಣೇಶ ಸೇವಾ ಟ್ರಸ್ಟ್ ಅಧ್ಯಕ್ಷ ಮಹಾಬಲ ಮಾರ್ಲ, ಸಂತೋಷ್ ಸಿಕ್ವೇರಾ, ಎರಿಕ್ ಡಿ’ಸೋಜಾ ಮುಂತಾದವರು ಉಪಸ್ಥಿತರಿದ್ದರು. ಉದ್ಘಾಟನಾ ಭಾಷಣ ಮಾಡಿದ ಅನಿಲ್ ಲೋಬೊ ಅವರು, ಭಿನ್ನ ಸಾಮರ್ಥ್ಯ ಮಕ್ಕಳ ಆರೈಕೆ, ಪಾಲನೆ ಮತ್ತು ಪೋಷಣೆ ಬಹಳ ಕಷ್ಟ. ಈ ಮಕ್ಕಳಲ್ಲಿ ವಿಶೇಷ ಪ್ರತಿಭೆ ಇರುತ್ತದೆ.
ಅದನ್ನು ಬೆಳಕಿಗೆ ತರಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗುತ್ತವೆ ಎಂದು ಹೇಳಿದರು. ಉದ್ಘಾಟನಾ ಕಾರ್ಯಕ್ರಮದ ಬಳಿಕ ಡೌನ್ ಸಿಂಡ್ರೋಮ್ ಮಕ್ಕಳಿಗಾಗಿ ವಿವಿಧ ಸ್ಪರ್ಧೆಗಳು ನಡೆದವು. ದಕ್ಷಿಣ ಕನ್ನಡ, ಉಡುಪಿ, ಕೊಡಗು ಜಿಲ್ಲೆಗಳ ಭಿನ್ನ ಸಾಮರ್ಥ್ಯ ಮಕ್ಕಳ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರೋಪದಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

