ಉಡುಪಿ: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸಹಕಾರದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ, ರಥಬೀದಿ ಗೆಳೆಯರು, ಸರ್ಕಾರಿ ಪ್ರಥಮ ದರ್ಜೆ ಹಾಗೂ ಪದವಿಪೂರ್ವ ಕಾಲೇಜು, ಹಿರಿಯಡಕ ಇದರ ಸಹಯೋಗದಲ್ಲಿ ಉಡುಪಿ ಜಿಲ್ಲೆಯ ಪದವಿಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕನ್ನಡ ಎಂ.ಎ ವಿದ್ಯಾರ್ಥಿಗಳಿಗೆ “ಕಬ್ಬದುಳುಮೆ ಹಳಗನ್ನಡ ಕಾವ್ಯದೋದು ಕಮ್ಮಟ”ವನ್ನು ಇದೇ ಸೆ.19ರಂದು ಹಿರಿಯಡಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿಸಲಾಗಿದೆ ಎಂದು ಹಿರಿಯಡಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಜಯಪ್ರಕಾಶ್ ಶೆಟ್ಟಿ ತಿಳಿಸಿದರು.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 9.45ಕ್ಕೆ ಹಿರಿಯ ಸಾಹಿತಿ ಬರಗೂರು ರಾಮಚಂದ್ರಪ್ಪನವರು ಕಮ್ಮಟವನ್ನು ಉದ್ಘಾಟಿಸಲಿದ್ದಾರೆ. ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಕಮ್ಮಟದ ಮೊದಲ ಭಾಗವಾಗಿ ಹಳಗನ್ನಡ ಕಾವ್ಯ: ಓದಿನ ಸವಾಲು ಮತ್ತು ಸಾಧ್ಯತೆಗಳು ಎಂಬ ವಿಷಯದ ಕುರಿತು ವಿಮರ್ಶಕ ರಾಮಲಿಂಗಪ್ಪ ಟಿ ಬೇಗೂರು ಹಾಗೂ ಎರಡನೆಯ ಗೋಷ್ಠಿಯಲ್ಲಿ ಪದವಿಪೂರ್ವ ಪಠ್ಯ ಮತ್ತು ಹಳಗನ್ನಡ ಕಾವ್ಯಭಾಗ’ ಎಂಬ ವಿಷಯದ ಕುರಿತು ಜಯಪ್ರಕಾಶ್ ಶೆಟ್ಟಿ ಎಚ್ ವಿಚಾರಮಂಡನೆ ಮಾಡಲಿದ್ದಾರೆ. ಕೃಷ್ಣ ಸಾಸ್ತಾನ ಕುವೆಂಪು ಗೀತೆಗಳನ್ನು ಹಾಡಲಿದ್ದಾರೆ.
ಉಡುಪಿ ಡಿ.ಡಿ.ಪಿ.ಯು ಮಾರುತಿ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಕಾರ್ಯಕ್ರಮದಲ್ಲಿ ಮಂಗಳಗಂಗೋತ್ರಿ ಎಸ್.ವಿ.ಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ನಾಗಪ್ಪಗೌಡ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ರಥಬೀದಿ ಗೆಳೆಯರು ಉಡುಪಿ ಅಧ್ಯಕ್ಷ ಉದ್ಯಾವರ ನಾಗೇಶ್ ಕುಮಾರ್, ಹಿರಿಯಡಕ ಪದವಿ ಕಾಲೇಜಿನ ಕನ್ನಡ ವಿಭಾಗ ಮುಖ್ಯಸ್ಥೆ ಸೌಮ್ಯಲತಾ ಪಿ, ಐಕ್ಯುಎಸಿ ಸಂಚಾಲಕ ಲಿತಿನ್ ಬಿ.ಎಂ., ಕನ್ನಡ ವಿಭಾಗದ ಮುಖ್ಯಸ್ಥ ನಾಗರಾಜ್, ಶಾಲಿನಿ ಉಪಸ್ಥಿತರಿದ್ದರು.

