ಪುತ್ತೂರು : ನಗರದ ನಟ್ಟೋಜ ಫೌಂಡೇಶನ್ ಟ್ರಸ್ಟ್ ಪ್ರವರ್ತಿತ ಅಂಬಿಕಾ ವಿದ್ಯಾಲಯ ಸಿಬಿಎಸ್‌ಇ ಸಂಸ್ಥೆಯಲ್ಲಿ ಶನಿವಾರ ಪೋಷಕರ ಸಭೆ ನಡೆಯಿತು.
ರಕ್ಷಕ – ಶಿಕ್ಷಕ ಸಂಘದ ಅಧ್ಯಕ್ಷ ಚಂದ್ರಕಾಂತ್ ಅವರು ಮಾತನಾಡಿ ನಾನು, ನನ್ನದು ಎನ್ನುವುದನ್ನು ಬಿಟ್ಟು ನಾವು, ನಮ್ಮದು ಎಂಬ ಭಾವ ಮೂಡಿದರೆ ಎಲ್ಲಾ ಕೆಲಸವೂ ಸುಗಮವಾಗುತ್ತದೆ. ತಪ್ಪನ್ನು ತಿದ್ದಿಕೊಳ್ಳುವ ಮನಸ್ಸನ್ನು ಪ್ರತಿಯೊಬ್ಬರೂ ಹೊಂದಿರಬೇಕಾದದ್ದು ಅತ್ಯಂತ ಅಗತ್ಯ. ಹೆತ್ತವರು ಮಕ್ಕಳಿಗೆ ಒತ್ತಡ ಹಾಕುವ ಬದಲು ಮಕ್ಕಳಿಗೆ ಇಷ್ಟವಾದ ಕ್ಷೇತ್ರಕ್ಕೆ ಕಳಿಸಿ ಅವರನ್ನು ಪ್ರೋತ್ಸಾಹಿಸಬೇಕು ಎಂದು ನುಡಿದರು.
ಶಾಲೆಯ ಪ್ರಾಂಶುಪಾಲೆ ಕುಮಾರಿ ಮಾಲತಿ. ಡಿ ಮಾತನಾಡಿ ಕಲಿಕೆಯು ನಾಲ್ಕು ಗೋಡೆಗೆ ಸೀಮಿತವಾದದ್ದಲ್ಲ. ವಿವಿಧ ಸ್ಥಳಗಳಿಗೆ ಭೇಟಿ ಕೊಡುವುದು, ಪುಸ್ತಕಗಳನ್ನು ಓದುವುದು ಹಾಗೂ ಹವ್ಯಾಸದಿಂದಲೂ ಕಲಿಕೆಗಳು ನಡೆಯಬಹುದು. ಆದ್ದರಿಂದ ಕಲಿಕೆಗೆ ವಿಸ್ತಾರವಾದ ಆಯಾಮವಿದೆ. ಇಂದಿನ ದಿನಗಳಲ್ಲಿ ಶಿಕ್ಷಣ ರಂಗದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ ಹಾಗೂ ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಬದಲಾವಣೆ ಅತ್ಯಂತ ಅಗತ್ಯವಾಗಿದೆ ಎಂದರು.
ಶಾಲೆಯ ಉಪ ಪ್ರಾಂಶುಪಾಲೆ ಸುಜನಿ ಬೋರ್ಕರ್ ಮಾತನಾಡಿ ಪ್ರತಿಯೊಬ್ಬರೂ ತಪ್ಪನ್ನು ಮಾಡುತ್ತಾರೆ. ತಪ್ಪಿನಿಂದಲೇ ಕಲಿಕೆ ಸಾಧ್ಯ. ಹಾಗಾಗಿ ಮಕ್ಕಳು ತಪ್ಪು ಮಾಡುವುದು ಸಹಜ. ಅವರನ್ನು ನಿತ್ಯವೂ ಗಮನಿಸಿ ಪ್ರೀತಿಯಿಂದ ತಿದ್ದಿ ಬೆಳೆಸಬೇಕು. ಮನೆಯ ಕಲಿಕೆಯೇ ಮುಂದಿನ ಕಲಿಕೆಗೆ ಅಡಿಪಾಯ ಆಗುತ್ತದೆ. ಆದ್ದರಿಂದ ಮಕ್ಕಳನ್ನು ಸಣ್ಣ ಪುಟ್ಟ ಕೆಲಸಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಅಭಿಪ್ರಾಯಪಟ್ಟರು.
ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಸುಬ್ರಮಣ್ಯ ನಟ್ಟೋಜ ಮಾತನಾಡಿ ಕೇವಲ ದುಡ್ಡನ್ನು ಹೇಗೆ ಗಳಿಸಬಹುದು ಎಂಬ ಉದ್ದೇಶವುಳ್ಳ ಕಲಿಕೆಯು ಇಂದಿನ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿದೆ. ಆದರೆ ದೇಶಾಭಿಮಾನ, ಸ್ವಾಭಿಮಾನ, ಸಮಾಜದ ಕಳಕಳಿ, ಧಾರ್ಮಿಕ ಶಿಕ್ಷಣ ಸಹಿತವಾದ ಶಿಕ್ಷಣ ಇಂದಿನ ಅಗತ್ಯ. ಮಕ್ಕಳನ್ನು ನಮ್ಮ ದೇಶದ ರಾಯಭಾರಿಗಳನ್ನಾಗಿ ತಯಾರು ಮಾಡುವ ಶಿಕ್ಷಣ ನಮಗೆ ಬೇಕಾಗಿದೆ ಎಂದರು.
ವಿದ್ಯಾರ್ಥಿಗಳಲ್ಲಿ ನಾನೊಬ್ಬ ಭಾರತೀಯ ಎಂಬ ಅಂತಃಕರಣ ಬೆಳೆಯಬೇಕು. ಶಿಕ್ಷಣ ಎಂದರೆ ಇನ್ನೊಬ್ಬರ ಕಷ್ಟಕ್ಕೆ ಸ್ಪಂದಿಸುವುದು ದೇಶವನ್ನು ಶಸ್ತçದಿಂದಲ್ಲ ಬದಲಿಗೆ ಶಾಸ್ತçದಿಂದ ಆಳಬೇಕು. ಹೀಗಾಗಬೇಕಾದರೆ ಶಿಕ್ಷಣದಲ್ಲಿ ಧಾರ್ಮಿಕ ಶಿಕ್ಷಣ ಅತ್ಯಂತ ಅವಶ್ಯಕವಾಗಿದೆ. ಯಾವಾಗ ಗುರುಕುಲ ಶಿಕ್ಷಣ ಪದ್ಧತಿ ಅಳಿವಿಗೆ ಮುಟ್ಟಿತೋ ಅಲ್ಲಿಂದ ಈ ಧಾರ್ಮಿಕ ಶಿಕ್ಷಣದ ಕೊರತೆ ಉಂಟಾಗಿದೆ ಎಂದರಲ್ಲದೆ ಧಾರ್ಮಿಕ ಶಿಕ್ಷಣವನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಷ್ಣು ಸಹಸ್ರನಾಮವನ್ನು ಕಂಠಪಾಠ ಮಾಡಿದ ವಿದ್ಯಾರ್ಥಿಗಳಿಗೆ ಒಂದು ಸಾವಿರ ನಗುದ ಬಹುಮಾನವನ್ನು ನೀಡಲಾಗುವುದು ಎಂದು ಘೋಷಿಸಿದರು.
ಕಾರ್ಯಕ್ರಮದಲ್ಲಿ ಅಂಬಿಕಾ ಸಮೂಹ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ರಾಜಶ್ರೀ ಎಸ್. ನಟ್ಟೋಜ ಉಪಸ್ಥಿತರಿದ್ದರು. ಶಿಕ್ಷಕಿ ದೀಪ್ತಿ ಕಾರ್ಯಕ್ರಮ ನಿರ್ವಹಿಸಿದರು.

