ನವದೆಹಲಿ: ದೇಶದಲ್ಲಿ ಯುವ ಜನರ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ  ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸುತ್ತಿದೆ.

ಮುಖ್ಯವಾಗಿ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಮೂಲಗಳ ಪ್ರಕಾರ, ಕೇಂದ್ರ ಸರ್ಕಾರವು ಮುಂದಿನ ಐದು ವರ್ಷಗಳಲ್ಲಿ ದೇಶದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ದ್ವಿಗುಣಗೊಳಿಸುವ ಗುರಿ ಹೊಂದಿದೆ. ಆ ಮೂಲಕ ಬೃಹತ್ ಉದ್ಯೋಗವಕಾಶವನ್ನು ಕಲ್ಪಿಸಲಿದೆ.

ದೇಶದ ಪ್ರಸ್ತುತ ಎಲೆಕ್ಟ್ರಾನಿಕ್ ರಫ್ತು 125-130 ಬಿಲಿಯನ್ ಡಾಲರ್‌ ಆಗಿದೆ. ಮುಂದಿನ ಐದು ವರ್ಷಗಳಲ್ಲಿ ಭಾರತದ ಎಲೆಕ್ಟ್ರಾನಿಕ್ ಉತ್ಪಾದನೆಯು 250 ಶತಕೋಟಿ ಡಾಲರ್‌ ತಲುಪುವ ಸಾಧ್ಯತೆ ಎಂದು ಸಚಿವಾಲಯದ ಮೂಲಗಳಿಂದ ತಿಳಿದುಬಂದಿದೆ.

ಎಲೆಕ್ಟ್ರಾನಿಕ್ ಉದ್ಯಮದಲ್ಲಿ 25 ಲಕ್ಷ ಮಂದಿ ಉದ್ಯೋಗಿಗಳಿದ್ದಾರೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಎಲೆಕ್ಟ್ರಾನಿಕ್ ಉತ್ಪಾದನಾ ವಲಯದಲ್ಲಿ ಉದ್ಯೋಗಗಳನ್ನು ಸೃಷ್ಟಿಸುವ ಯೋಜನೆ ರೂಪಿಸುತ್ತಿದೆ. ಆ ಮೂಲಕ ಮುಂದಿನ ಐದು ವರ್ಷಗಳಲ್ಲಿ ಭಾರತದ ಎಲೆಕ್ಟ್ರಾನಿಕ್ ಉತ್ಪಾದನಾ ವಲಯದ ಉದ್ಯೋಗಿಗಳನ್ನು 25 ಲಕ್ಷದಿಂದ ಸುಮಾರು 50 ಲಕ್ಷಕ್ಕೆ ದ್ವಿಗುಣಗೊಳಿಸುವ ಗುರಿ ಸರ್ಕಾರಕ್ಕಿದೆ ಎನ್ನಲಾಗಿದೆ.

“ಡಿಜಿಟಲ್ ತಂತ್ರಜ್ಞಾನಕ್ಕೆ ಸೇವೆಗಳನ್ನು ಒದಗಿಸುವಲ್ಲಿ ನಮ್ಮ ಗಮನವು ಒಂದೇ ಆಗಿರುತ್ತದೆ. ನಮ್ಮ ಗಮನ ದೊಡ್ಡ ಪ್ರಮಾಣದ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ಹೆಚ್ಚಿಸುವುದರ ಮೇಲೆ ಇದೆ. ಆ ಗಮನ ನಿಖರವಾಗಿರುತ್ತದೆ. ಮತ್ತು ಆ ಗುರಿಯನ್ನು ವೇಗವಾಗಿ ತಲುಪುತ್ತೇವೆ” ಎಂದು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಭಾರತವು ಈಗಾಗಲೇ ಆಮದು ಪರ್ಯಾಯವನ್ನು ಬಿಟ್ಟು ಸ್ವಾವಲಂಬಿಯಾಗಿ ಇರಲು ಪ್ರಯತ್ನಿಸುತ್ತಿದೆ, ಮೊಬೈಲ್ ಪೋನ್ ಗಳಂತಹ ಕೆಲವು ವಿಭಾಗಗಳನ್ನು ರಫ್ತು ಮಾಡುವ ಹಂತಕ್ಕೆ ಬಂದಿದೆ. ಆದರೆ ಲ್ಯಾಪ್ ಟಾಪ್‌ಗಳಿಗೆ ಸಂಬಂಧಿಸಿದಂತೆ ಭಾರತವು ಅದನ್ನು ನಮ್ಮಲ್ಲೇ ಉತ್ಪಾದಿಸುವ ಹಂತದಲ್ಲಿದೆ.

ಪ್ರಧಾನಿ ಮೋದಿಯವರ ನೇತೃತ್ವದ ಸರ್ಕಾರ 760 ಶತಕೋಟಿ ರೂಪಾಯಿಗಳ ಹಣಕಾಸಿನ ವೆಚ್ಚವನ್ನು ಎಲೆಕ್ಟ್ರಾನಿಕ್ ಉದ್ಯೋಗಿಗಳ ಬದ್ಧತೆಗೆ ವಿನಿಯೋಗಿಸುತ್ತಿದೆ. ನಿರುದ್ಯೋಗ ನಿವಾರಣೆಯ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ.

ಭಾರತದಲ್ಲಿ ಎಲೆಕ್ಟ್ರಾನಿಕ್ ಉತ್ಪಾದನಾ ವಲಯದ ಪರಿವರ್ತನೆಯಿಂದ ಭಾರತವು ಜಾಗತಿಕ ಎಲೆಕ್ಟ್ರಾನಿಕ್ ಉತ್ಪಾದನಾ ಕೇಂದ್ರವಾಗಿ ಸ್ಥಾನ ಪಡೆಯಲಿದೆ. ಇದರಿಂದ ದೇಶದ ಆರ್ಥಿಕ ಅಭಿವೃದ್ಧಿ, ಉದ್ಯೋಗ ಸೃಷ್ಟಿ ಮತ್ತು ತಾಂತ್ರಿಕ ಆವಿಷ್ಕಾರ ಬಲಗೊಳ್ಳಲಿದೆ, ಅದಕ್ಕಾಗಿ ಭಾರತ ವಿವಿಧ ಯೋಜನೆಗಳನ್ನು ಪ್ರಕಟಿಸುತ್ತಿದೆ.